ಬದಿಯಡ್ಕ: ಯೋಗದಿನದ ಆಚರಣೆ ನಮಗೆ ಲಭಿಸಿದ ಸುಯೋಗವಾಗಿದೆ. ಉತ್ತರಾಯಣ ಕಳೆದು ದಕ್ಷಿಣಾಯನದ ಬರುವ ದಿನದಂದೇ ಯೋಗದಿನಾಚರಣೆ ನಡೆಯುತ್ತಿದೆ. ನಮ್ಮೊಳಗಿನ ಆತ್ಮವು ಪರಮಾತ್ಮನಲ್ಲಿ ಒಂದಾಗುವುದೇ ಯೋಗ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಶ್ಯಾಮಪ್ರಸಾದ ಕುಳಮರ್ವ ಅಭಿಪ್ರಾಯಪಟ್ಟರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶನಿವಾರ ಜರಗಿದ ವಿಶ್ವಯೋಗದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಮಾಯಣದಲ್ಲಿ ಬರುವ ಲಕ್ಷ್ಮಣನು ಯೋಗಸಾಧನೆಯ ಮೂಲಕ 13 ವರ್ಷಗಳ ಕಾಲ ನಿದ್ರೆ ಆಹಾರವನ್ನು ಬಿಟ್ಟು ಜೀವನವನ್ನು ಮಾಡಿದ ಮಹಾನ್ ಸಾಧಕ. ಶ್ರೀಕೃಷ್ಣನು ಯೋಗದ ಮೂಲಕ ಚಕ್ರವನ್ನೇ ಗರಗರನೆ ತಿರುಗಿಸುವ ಚಾಕಚಕ್ಯತೆಯನ್ನು ಪಡೆದಾತ. ಆಧುನಿಕ ಕಾಲದಲ್ಲಿ ಪತಂಜಲಿ ಮಹಾಮುನಿಯು ಯೋಗವು ಅಳಿದು ಹೋಗದಂತೆ ರಕ್ಷಿಸಿ ನಮಗೆ ಬೆಳಕಾದರು. ನಮ್ಮ ಮನದಲ್ಲಿರುವ ಗೊಂದಲಗಳ ನಿವಾರಣೆಗೆ ಯೋಗ ಸಾಧನೆ ಬೇಕು. ಎಲ್ಲವನ್ನೂ ದಿಟ್ಟವಾಗಿ ಎದುರಿಸುವ ಧೈರ್ಯ ಯೋಗದಿಂದ ನಮಗೆ ಲಭಿಸುತ್ತದೆ ಎಂದರು.
ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯೋಗ ಅಧ್ಯಾಪಕ ವಿನಯಪಾಲ್ ನೇತೃತ್ವದಲ್ಲಿ ಮಕ್ಕಳು ವಿವಿಧ ಆಸನಗಳು, ಪ್ರಾಣಾಯಾಮ, ಪಿರಮಿಡ್‍ಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.




.jpg)
.jpg)
