ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ಡೆಮಾಕ್ರಟಿಕ್ ಮೇಯರ್ ಸ್ಥಾನಕ್ಕಾಗಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಇಂಡೋ-ಅಮೆರಿಕನ್ ಅಭ್ಯರ್ಥಿ ಜೊಹ್ರಾನ್ ಮಮ್ದಾನಿ ಅವರು ಮಾಜಿ ಗವರ್ನರ್ ಆಯಂಡ್ರ್ಯೂ ಕೌಮೋ ಅವರನ್ನು ಮಣಿಸಿದ್ದಾರೆ. ಈ ವಿಜಯವನ್ನು ಅಮೆರಿಕದ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಟ್ರೂಥ್‌ನಲ್ಲಿ ಪೋಸ್ಟ್ ಮಾಡಿರುವ ಅವರು ಜೊಹ್ರಾನ್ ಮಮ್ದಾನಿ ಶೇ.100ರಷ್ಟು ಕಮ್ಯೂನಿಸ್ಟ್ ಹುಚ್ಚ ಎಂದು ಟ್ರಂಪ್ ಜರೆದಿದ್ದಾರೆ.

ಶೇ.100ರಷ್ಟು ಕಮ್ಯೂನಿಸ್ಟ್ ಹುಚ್ಚರಾದ ಜೋಹ್ರಾನ್ ಮಮ್ದಾನಿ ಅವರನ್ನು ನ್ಯೂಯಾರ್ಕ್ ನಗರದ ಮೇಯರ್ ಅಭ್ಯರ್ಥಿಯ ಪ್ರಾಥಮಿಕ ಚುನಾವಣೆಯಲ್ಲಿ ಆಯ್ಕೆ ಮಾಡುವ ಮೂಲಕ, ಡೆಮೊಕ್ರಾಟ್‌ಗಳು ತಮ್ಮ ನಿಜ ಬಣ್ಣ ಬಯಲು ಮಾಡಿದ್ದಾರೆ. ಮಮ್ದಾನಿ ಭಯಾನಕವಾಗಿ ಕಾಣುತ್ತಾರೆ, ಅವರ ಧ್ವನಿ ಗಡಸುತನದಿಂದ ಕೂಡಿದೆ, ಅವರು ತುಂಬಾ ಬುದ್ಧಿವಂತರಲ್ಲ ಆದರೆ ಡೆಮೊಕ್ರಾಟ್‌ಗಳು ಇಂತಹವರನ್ನು ಬೆಂಬಲಿಸುತ್ತಿದ್ದಾರೆ ಎಂದು ಟ್ರಂಪ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಮೇಯರ್ ಅಂತಿಮ ಆಯ್ಕೆಗೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಜೊಹ್ರಾನ್ ಅವರು ಮಾಜಿ ಮೇಯರ್, ರೆಪಬ್ಲಿಕನ್ ಪಕ್ಷದ ಎರಿಕ್ ಆಯಡಮ್ಸ್ ಅವರನ್ನು ಎದುರಿಸಬೇಕಿದೆ. ಜುಲೈ 1ರಂದು ಅಧಿಕೃತ ಫಲಿತಾಂಶ ಹೊರಬೀಳಲಿದೆ.
ಕ್ವೀನ್ಸ್‌ನ ಡೆಮಾಕ್ರಟಿಕ್ ಸೋಷಿಯಲಿಸ್ಟ್ ಮತ್ತು ಸ್ಟೇಟ್ ಅಸೆಂಬ್ಲಿ ಸದಸ್ಯರಾಗಿರುವ ಜೊಹ್ರಾನ್ ಅವರು ಭಾರತದ ಪ್ರಖ್ಯಾತ ಸಿನಿಮಾ ನಿರ್ಮಾಪಕಿ ಮೀರಾ ನಾಯರ್ ಮತ್ತು ಭಾರತೀಯ ಮೂಲದ ಉಗಾಂಡಾದ ಮಾರ್ಕ್ಸ್‌ವಾದಿ ವಿದ್ವಾಂಸ ಮಹಮೂದ್ ಮಮ್ದಾನಿ ಅವರ ಪುತ್ರ.




