ಚಿಂಗ್ಡವ್: ಚೀನಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಭಾಗವಹಿಸಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
2020ರ ಮೇ ತಿಂಗಳಲ್ಲಿ ಲಡಾಖ್‌ನ ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ಉಂಟಾದ ಮಿಲಿಟರಿ ಸಂಘರ್ಷದ ನಂತರ ಭಾರತದ ಹಿರಿಯ ಸಚಿವರೊಬ್ಬರು ಇದೇ ಮೊದಲ ಬಾರಿಗೆ ಚೀನಾಕ್ಕೆ ಭೇಟಿ ನೀಡಿದ್ದಾರೆ.
ರಾಜನಾಥ ಸಿಂಗ್ ಅವರನ್ನು ಚಿಂಗ್ಡವ್ ವಿಮಾನದಲ್ಲಿ ಭಾರತೀಯ ರಾಯಭಾರಿ ಪ್ರದೀಪ್ ಕುಮಾರ್ ರಾವತ್ ಬರಮಾಡಿಕೊಂಡರು.
ಪಾಕಿಸ್ತಾನ ಬೆಂಬಲಿತ ಗಡಿಯಾಚೆಗಿನ ಭಯೋತ್ಪಾದನೆ ಕುರಿತಂತೆ ರಾಜನಾಥ ಸಿಂಗ್ ಪ್ರಸ್ತಾಪಿಸುವ ನಿರೀಕ್ಷೆ ಇದೆ. ಅಲ್ಲದೆ ಶಾಂಘೈ ಸಹಕಾರ ಸಂಘಟನೆಯ ಬದ್ಧತೆಯನ್ನು ಎತ್ತಿ ಹಿಡಿಯಲಿದ್ದಾರೆ. ಶಾಂತಿ ಹಾಗೂ ಸುರಕ್ಷತೆ ಹಾಗೂ ಭಯೋತ್ಪಾದನೆ ನಿರ್ಮೂಲನೆ ಮಾಡುವಲ್ಲಿ ಭಾರತದ ದೃಷ್ಟಿಕೋನವನ್ನು ವಿವರಿಸಲಿದ್ದಾರೆ.
ಈ ಸಂದರ್ಭದಲ್ಲಿ ಚೀನಾ ಹಾಗೂ ರಷ್ಯಾದ ಪ್ರತಿನಿಧಿಗಳೊಂದಿಗೂ ರಾಜನಾಥ ಸಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.




