ಇಸ್ಲಾಮಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೀರ್ಘಾವಧಿ ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಅತೀವ ಆಸಕ್ತಿ ವ್ಯಕ್ತಪಡಿಸಿದ್ದಾರೆ ಪಾಕಿಸ್ತಾನ ಸೇನೆ ಗುರುವಾರ ತಿಳಿಸಿದೆ.
ಜಂಟಿ ಭಯೋತ್ಪಾದನಾ ನಿಗ್ರಹ ಪ್ರಯತ್ನಗಳ ಬಗ್ಗೆಯೂ ಚರ್ಚಿಸಿದೆ ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಪ್ರಕಟಣೆಯಲ್ಲಿ ತಿಳಿಸಿದೆ.
ಟ್ರಂಪ್ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಬುಧವಾರ ಶ್ವೇತಭವನದಲ್ಲಿ ನಡೆದ ಔತಣಕೂಟ ಸಭೆಯ ಬಳಿಕ ಪಾಕಿಸ್ತಾನದಿಂದ ಈ ಹೇಳಿಕೆ ಹೊರಬಿದ್ದಿದೆ.
'ಟ್ರಂಪ್ ಅವರ ರಾಜಕೀಯ ಮತ್ತು ಜಾಗತಿಕ ಸಮುದಾಯ ಎದುರಿಸುತ್ತಿರುವ ಬಹುಮುಖಿ ಸವಾಲುಗಳನ್ನು ಗ್ರಹಿಸುವ ಮತ್ತು ಅದನ್ನು ಪರಿಹರಿಸುವ ಅವರ ಸಾಮರ್ಥ್ಯವನ್ನು ಮುನೀರ್ ಶ್ಲಾಘಿಸಿದರು' ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
'ಇದಕ್ಕೆ ಪ್ರತಿಯಾಗಿ ಟ್ರಂಪ್, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಪಾಕಿಸ್ತಾನದ ನಿರಂತರ ಪ್ರಯತ್ನಗಳನ್ನು ಶ್ಲಾಘಿಸಿದರು. ಭಯೋತ್ಪಾದನಾ ನಿಗ್ರಹಕ್ಕೆ ಪಾಕಿಸ್ತಾನದ ಸಹಕಾರವನ್ನು ಶ್ಲಾಘಿಸಿದರು' ಎಂದು ತಿಳಿಸಿದೆ.

