ಉಪ್ಪಳ: ಗಡಿನಾಡಿನ ಕನ್ನಡಿಗರ ಭಾವನೆಗಳಿಗೆ ಸ್ಪಂದಿಸುವುದರ ಜತೆಗೆ ಕನ್ನಡ ಭಾಷೆ, ಕನ್ನಡ ಶಾಲೆಗಳ ಉಳಿವಿಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿರಂತರ ಶ್ರಮ ವಹಿಸಲಿರುವುದಾಗಿ ಪ್ರಾಧಿಕಾರ ಅದ್ಯಕ್ಷ ಸೋಮಣ್ಣ ಬೇವಿನಮರದ ತಿಳಿಸಿದ್ದಾರೆ.
ಅವರು ಜೋಡುಕಲ್ಲು ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹ ಸಂಸ್ಥೆಗಳ ವತಿಯಿಂದ ನಿವೃತ್ತ ಕನ್ನಡ ಪ್ರಾಧ್ಯಾಪಕ, ಜಾನಪದ ವಿದ್ವಾಂಸ, ಯಕ್ಷಗಾನ ಗೊಂಬೆಯಾಟ ಕಲಾವಿದ ಪ್ರೊ..ಎ.ಶ್ರೀನಾಥ್ ಕಾಸರಗೋಡು ಅವರಿಗೆ ಕೊಡಮಾಡಲಾದ ಪ್ರತಿಷ್ಠಿತ "ಕಯ್ಯಾರ" ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾನ್ ಚೇತನ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಕಾಸರಗೋಡಿನ ವಿಲೀನೀಕರಣದ ಕನಸು ನನಸಾಗದೇ ಹೋಗಿದ್ದರೂ, ಗಡಿನಾಡ ಕನ್ನಡಿಗರನ್ನು ಕರ್ನಾಟಕ ಎಂದಿಗೂ ಕೈಬಿಡದು. ಗಡಿನಾಡ ಕನ್ನಡಿಗರ ಶಿಕ್ಷಣಕ್ಕೆ ನಿರಂತರ ಪ್ರೋತ್ಸಾಹ ನೀಡುವುದರ ಜತೆಗೆ ಅವರಿಗೆ ಉದ್ಯೋಗ ಸವಲತ್ತೂ ಒದಗಿಸಕೊಡಲಾಗುವುದು. ಕರ್ನಾಟಕದ ಗಡಿ ಹಂಚಿಕೊಂಡಿರುವ ಎಲ್ಲ ರಾಜ್ಯಗಳ ಗಡಿಪ್ರದೇಶದಲ್ಲಿರುವ ಕನ್ನಡಿಗರು ಅತಂತ್ರ ಸ್ಥಿತಿ ಹೋಗಲಾಡಿಸಲು ಪ್ರಾಧಿಕರ ನಿರಂತರ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಕಯ್ಯಾರರ ಕೃತಿಗಳ ಮರು ಪ್ರಕಟಣೆ:
ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಹೋರಾಟದ ಕಿಚ್ಚು ಇಂದಿನ ಕಾಲಘಟ್ಟದಲ್ಲಿ ಹೆಚ್ಚು ಪ್ರಸಕ್ತವಾಗಿದ್ದು, ಡಾ. ಕಯ್ಯಾರರ 'ದುಡಿತವೇ ದೇವರು' ಕೃತಿಯನ್ನು ಮರು ಪ್ರಕಟಣೆಗೆ ಬೇಕಾದ ಎಲ್ಲಾ ನೆರವು ಪ್ರಾಧಿಕಾರ ನೀಡಲಿರುವುದಾಗಿ ಸೋಮಣ್ಣ ಬೇವಿನಮರದ ತಿಳಿಸಿದರು. ಡಾ. ಕಯ್ಯಾರ ಅವರ ಹೆಸರು ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಸುಸಜ್ಜಿತ ಭವನವೊಂದು ಪೆರಡಾಲದ ಕವಿತಾ ಕುಟೀರ ಸನಿಹ ತಲೆಯೆತ್ತಿದ್ದು, ಮುಂದಿನ ತಿಂಗಳು ಇದರ ಲೋಕಾರ್ಪಣೆಕಾರ್ಯ ನಡೆಯಲಿರುವುದಾಗಿ ತಿಳಿಸಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಸಮಾರಂಭ ಉದ್ಘಾಟಿಸಿ ಮಾತನಾಡಿ ಮೇರು ಸಾಹಿತಿ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಿನ ಪ್ರಶಸ್ತಿಯೊಂದನ್ನು ಸೂಕ್ತ ವ್ಯಕ್ತಿತ್ವಕ್ಕೆ ಕೊಡಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು. ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ದುಬೈನ ಸಾಹಿತ್ಯ ಸಂಘಟಕ, ಖ್ಯಾತ ಕೊಂಕಣಿ ಗಾಯಕ ಜೋಸೆಫ್ ಮಾಥಿಯಾಸ್ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಬಹುಭಾಷಾ ಸಾಹಿತಿ ಮಹಮ್ಮದ್ ಬಡ್ಡೂರ್ ಸಂಸ್ಮರಣಾ ಭಾಷಣ ಮಾಡಿದರು. ಈ ಸಂದರ್ಭ ಅಬ್ದುಲ್ ಅಜೀಜ್ ಬೈಕಂಪಾಡಿ ಅವರ'ಬ್ಯಾರಿ ಬಾಸೆ ಪಡಿಕೊರು'ಪುಸ್ತಕದ ಬಿಡುಗಡೆ ನಡೆಯಿತು.
ಪೈವಳಿಕೆ ಗ್ರಾಪಂ ಅಧ್ಯಕ್ಷ ಜಯಂತಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಸದಸ್ಯರಾದ ಶಿವರೆಡ್ಡಿ, ಎ.ಆರ್ ಸುಬ್ಬಯ್ಯಕಟ್ಟೆ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ ಫಾತಿಮತ್ ಜುಹರಾ, ಪೆರಡಾಲ ಕವಿತಾ ಕುಟೀರ ಅಧ್ಯಕ್ಷ ದುರ್ಗಾಪ್ರಸಾದ ರೈ, ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಮಂಜುನಾಥ ಆಳ್ವ ಮಡ್ವ, ಶ್ರೀಧರ ಹೊಳ್ಳ ಪೈವಳಿಕೆ, ಅಶ್ರಫ್ ಪಿ.ಪಿ ಮೊದಲದವರು ಉಪಸ್ಥಿತರಿದ್ದರು.
ಗಡಿನಾಡ ಸಾಹಿತ್ಯ ಸಾಂಸ್ಕ್ರತಿಕ ಅಕಾಡಮಿ ಅಧ್ಯಕ್ಷ ಚನಿಯಪ್ಪ ನಾಯ್ಕ್ ಸ್ವಾಗತಿಸಿದರು. ಕನ್ನಡ ಮಾಧ್ಯಮ ಪತ್ರಕರ್ತರ ಸಂಘ ಅಧ್ಯಕ್ಷ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಗಡಿನಾಡ ಸಾಹಿತ್ಯ ಸಾಂಸ್ಕ್ರತಿಕ ಅಕಾಡಮಿ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ವಂದಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಮತ್ತು ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಕಲ್ಕೂರ ಪ್ರತಿಷ್ಠಾನ ಮಂಗಳೂರು, ಗ್ರೀನ್ ಸ್ಟಾರ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಕಯ್ಯಾರ್, 16ನೇ ವಾರ್ಡು ಕಯ್ಯಾರು ಕುಟುಂಬ ಶ್ರೀ ಘಟಕಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.


