ಲಾಸ್ ಏಂಜಲೀಸ್: ವಲಸೆ ಅಧಿಕಾರಿಗಳು ಕೈಗೊಂಡಿರುವ ಶೋಧ ಕಾರ್ಯಾಚರಣೆ ವಿರುದ್ಧ ಲಾಸ್ ಏಂಜಲೀಸ್‌ನಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಮೇಯರ್ ಕರೆನ್ ಬಾಸ್ ಆದೇಶಿಸಿದ್ದಾರೆ.
ವಿಧ್ವಂಸಕ ಕೃತ್ಯಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಬೇಕಾಯಿತು ಎಂದು ಸುದ್ದಿಗೋಷ್ಠಿಯಲ್ಲಿ ಕರನ್ ತಿಳಿಸಿದ್ದಾರೆ.
ಅಲ್ಲದೇ ಇಲ್ಲಿಯವರೆಗೆ ಸುಮಾರು 23 ಅಂಗಡಿ-ಮುಂಗಟ್ಟುಗಳು ಲೂಟಿಯಾಗಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಲಾಸ್ ಏಂಜಲೀಸ್ ಪೊಲೀಸ್ ಮುಖ್ಯಸ್ಥ ಜಿಮ್ ಮೆಕ್‌ಡೊನೆಲ್, ಕಾನೂನುಬಾಹಿರ ಮತ್ತು ಅಪಾಯಕಾರಿ ನಡವಳಿಕೆ ಹೆಚ್ಚುತ್ತಿದ್ದು, ನಿಷೇಧಾಜ್ಞೆ ಜಾರಿಗೊಳಿಸಲು ನಿರ್ಧರಿಸಲಾಯಿತು' ಎಂದಿದ್ದಾರೆ.
ವಲಸೆ ಮತ್ತು ಕಸ್ಟಮ್ಸ್ ಅಧಿಕಾರಿಗಳು ಲಾಸ್ ಏಂಜಲೀಸ್ ನಗರದ ವಿವಿಧ ಭಾಗಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ವಲಸೆ ನೀತಿ ಉಲ್ಲಂಘಿಸಿದ ಆರೋಪದಲ್ಲಿ 44 ಮಂದಿಯನ್ನು ಶುಕ್ರವಾರ ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಪ್ರತಿಭಟನೆಗಳು ಭುಗಿಲೆದ್ದಿವೆ.




