ತಿರುವನಂತಪುರ: ಕೇರಳದ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ತರಗತಿಯೊಳಗೆ ವಿದ್ಯಾರ್ಥಿನಿಯರಿಗೆ ಒತ್ತಾಯಪೂರ್ವಕವಾಗಿ ಬಸ್ಕಿ ಶಿಕ್ಷೆ ನೀಡಿದ ಕಾರಣ ಶಿಕ್ಷಣ ಇಲಾಖೆಯು ಅವರಿಗೆ ಶೋಕಾಸ್ ನೋಟಿಸ್ ನೀಡಿದೆ.
ಕಾಟನ್‌ಹಿಲ್‌ನ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ರಾಷ್ಟ್ರಗೀತೆಯ ಸಮಯದಲ್ಲಿ ವಿದ್ಯಾರ್ಥಿನಿಯರು ತರಗತಿಯಿಂದ ಹೊರನಡೆದ ಕಾರಣ ಬಸ್ಕಿ ಶಿಕ್ಷೆ ನೀಡಲಾಗಿತ್ತು. ಇದರಿಂದಾಗಿ ಹಲವರು ಬಸ್ ತಪ್ಪಿಸಿಕೊಂಡಿದ್ದಾರೆ. ಶಾಲೆಯಿಂದ ತಡವಾಗಿ ಮನೆಗೆ ಮರಳಿದಾಗ, ಪೋಷಕರು ಈ ಕುರಿತು ವಿಚಾರಿಸಿದಾಗ ಘಟನೆ ಬಯಲಿಗೆ ಬಂದಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಘಟನೆಯ ಕುರಿತು ಕೇರಳ ಶಿಕ್ಷಣ ಇಲಾಖೆಯು ಸಂಕ್ಷಿಪ್ತ ಹೇಳಿಕೆಯನಷ್ಟೇ ನೀಡಿದೆ. ಶಾಲಾ ಶಿಕ್ಷಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಶಿಕ್ಷಣ ಸಚಿವ ವಿ. ಶಿವಕುಟ್ಟಿ ಅವರ ಆದೇಶದಂತೆ ತನಿಖೆ ಮಾಡಲಾಗುತ್ತಿದೆ. ಜಿಲ್ಲಾ ಶಿಕ್ಷಣಾಧಿಕಾರಿಯವರ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದೆ.




