ಕಾಸರಗೋಡು: ಶಿಥಲಗೊಂಡಿದ್ದ ಕಾಸರಗೋಡು ಕರಂದಕ್ಕಾಡಿನಿಂದ ರೈಲ್ವೆ ನಿಲ್ದಾಣ ಸಾಗುವ ರಸ್ತೆಯ ಅಭಿವೃದ್ಧಿ ಕಾರ್ಯ ನಡೆಸಿದ ಕೆಲವೇ ದಿವಸಗಳಲ್ಲಿ ಮತ್ತೆ ಹಾನಿಗೀಡಾಗಿದ್ದು, ರಸ್ತೆ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರ ಬಯಲಿಗೆಳೆಯುವಂತೆ ಭಾರತೀಯ ಮಜ್ದೂರ್ ಸಂಘ(ಬಿಎಂಎಸ್)ಸಂಬಂಧಪಟ್ಟವರನ್ನು ಆಗ್ರಹಿಸಿದೆ.
ಕಳಪೆ ಕಾಮಗಾರಿಗೆ ಕಾರಣರಾದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು, ನಗರದ ಶೋಚನೀಯಾವಸ್ಥೆಯಲ್ಲಿರುವ ರಸ್ತೆಗಳ ದುರಸ್ತೆ ನಡೆಸಬೇಕು, ನಗರದಲ್ಲಿ ಪದೇ ಪದೆ ಉಂಟಾಗುವ ಟ್ರಾಫಿಕ್ ಜಾಮ್‍ಗೆ ಪರಿಹಾರ ಕಂಡುಕೊಳ್ಳಬೇಕು, ಒಳಚರಂಡಿ ಕಾಮಗಾರಿ ಶೀಘ್ರ ನಡೆಸಬೇಕು, ಹೊಸ ಬಸ್ ನಿಲ್ದಾಣ ವಠಾರದಲ್ಲಿ ದಾಸ್ತಾನುಗೊಳ್ಳುವ ಮಲಿನಜಲ ತೆರವುಗೊಳಿಸಿ ಮಳೆನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಬಿಎಂಎಸ್ ಕಾಸರಗೋಡು ವಲಯ ಸಮಿತಿ ವತಿಯಿಂದ ಕಾಸರಗೋಡು ನಗರಸಭಾ ಕಚೇರಿ ಎದುರು ಧರಣಿ ಆಯೋಜಿಸಲಾಯಿತು.
ಬಿಎಂಎಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ವಿ ಬಾಬು ಧರಣಿ ಉದ್ಘಾಟಿಸಿದರು. ಆಟೋರಿಕ್ಷಾ ಮಜ್ದೂರ್ ಸಂಘ ಜಿಲ್ಲಾ ಸಮಿತಿ ಉಪಾಧ್ಯಕ್ಷ ಕುಞÂಕಣ್ಣನ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಎ. ಕೇಶವ, ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ, ಬಿಎಂಎಸ್ ಜಿಲ್ಲಾ ಜತೆಕಾರ್ಯದರ್ಶಿ ದಿನೇಶ್ ಬಂಬ್ರಾಣ ಉಪಸ್ಥಿತರಿದ್ದರು. ಬಿಎಂಎಸ್ ಜಿಲ್ಲಾ ಜತೆಕಾರ್ಯದರ್ಶಿಗಳಾದ ಗುರುದಸ್ ಮಧೂರು, ಹರೀಶ್ ಕುದ್ರೆಪ್ಪಾಡಿ, ಉದುಮವಲಯ ಕಾರ್ಯದರ್ಶಿ ಭಾಸ್ಕರನ್ ಪೊಯಿನಾಚಿ, ಚೆಂಗಳ ಪಂಚಾಯಿತಿ ಸಮಿತಿ ಕಾರ್ಯದರ್ಶಿ ರಂಜಿತ್ ಚೆರ್ಕಳ, ಆಟೋರಿಕ್ಷಾ ಮಜ್ದೂರ್ ಸಂಘ ಕಾಸರಗೋಡು ವಲಯ ಅಧ್ಯಕ್ಷ ಎಸ್.ಕೆ ಉಮೇಶ್ ಧರಣಿ ನೇತೃತ್ವ ವಹಿಸಿದ್ದರು. ಬಾಬು ಮೋನ್ ಚೆಂಗಳ ಸ್ವಾಗತಿಸಿದರು. ನಗರ ಸಮಿತಿ ಕಾರ್ಯದರ್ಶಿ ಮನೋಜ್ ವಂದಿಸಿದರು.




