ಕಾಸರಗೋಡು: ಮಧೂರು ರಸ್ತೆ ಮತ್ತು ಹೊಸ ಬಸ್ ನಿಲ್ದಾಣದ ನಡುವೆ ಬರುವ ಅರಮನ ಆಸ್ಪತ್ರೆ ಮತ್ತು ಕಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ತೆಂಕುಭಾಗಕ್ಕೆ ಸಾಗುವ ಅಂಡರ್‍ಪಾಸ್ ರಸ್ತೆಯನ್ನು ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಮುಚ್ಚಿರುವ ಕ್ರಮ ಸರಿಯಲ್ಲ ಎಂದು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಹೆದ್ದಾರಿ ನಿರ್ಮಾಣ ವಿಭಾಗ ಅಧಿಕಾರಿಗಳ ಇಂತಹ ಧೋರಣೆಗೆ ಸ್ಥಳೀಯರು ಮತ್ತು ಆಸ್ಪತ್ರೆ ಅಧಿಕಾರಿಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಈ ಬಗ್ಗೆ ಗಮನಹರಿಸುವಂತೆ ಸಂಘಟನೆ ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ಸಂಬಂಧಪಟ್ಟವರನ್ನು ಒತ್ತಾಯಿಸಿದ್ದಾರೆ.
ಈ ಹಾದಿ ಮುಚ್ಚುವುದರಿಂದ ಜಿಲ್ಲಾ ವ್ಯಾಪಾರ ಭವನ, ಬ್ಲಾಕ್ ಪಂಚಾಯಿತಿ ಕಚೇರಿ, ಸಿನಿಮಾ ಮಂದಿರ, ಕೃಷಿ ಭವನ ಮುಂತಾದ ಸ್ಥಳಗಳಿಗೆ ಹೋಗುವವರು ಸಮಸ್ಯೆ ಎದುರಿಸಬೇಕಾಗುತ್ತದೆ. ಅಲ್ಲದೆ ಈ ಪ್ರದೇಶದಲ್ಲಿ ಎರಡು ಪ್ರಮುಖ ಆಸ್ಪತ್ರೆಗಳು ಕಾರ್ಯಾಚರಿಸುತ್ತಿದ್ದು, ತುರ್ತಾಗಿ ಮಂಗಳೂರು ಆಸ್ಪತ್ರೆಗೆ ಆಂಬುಲೆನ್ಸ್ ಸಂಚರಿಸಬೇಕಾದರೆ, ಎರಡು ಫರ್ಲಾಂಗು ದೂರದ ಹೊಸ ಬಸ್ ನಿಲ್ದಾಣದ ವರೆಗೂ ತೆರಳಿ, ಅಲ್ಲಿಂದ ಮತ್ತೆ ಮಂಗಳೂರು ರಸ್ತೆಗೆ ಸಾಗಬೇಕಾಗಿದೆ. ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಿರಂತರ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಇದರಿಂದ ಮತ್ತಷ್ಟು ಸಮಸ್ಯೆ ಎದುರಾಗಲಿರುವುದಾಗಿ ತಿಳಿಸಿದ್ದಾರೆ. ಸರ್ವೀಸ್ ರಸ್ತೆಯಿಂದ ಅಂಡರ್‍ಪಾಸ್ ಮೂಲಕ ಈ ಹಿಂದೆ ಅಸ್ತಿತ್ವದಲ್ಲಿದ್ದ ರಸ್ತೆಯನ್ನು ತೆರವುಗೊಳಿಸಿಕೊಡುವಂತೆ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.




