HEALTH TIPS

ಅವನತಿಯಲ್ಲಿ ಬದಿಯಡ್ಕದ ಕಯ್ಯಾರರ ಹೆಸರಿನ ಗ್ರಂಥಾಲಯ

ಬದಿಯಡ್ಕ: ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈಗಳ ಸ್ಮರಣಾರ್ಥ ಬದಿಯಡ್ಕದಲ್ಲಿ ಸ್ಥಾಪಿಸಲಾದ ಗ್ರಂಥಾಲಯ ಹಾಗೂ ವಾಚನಾಲಯ ಸರಿಯಾದ ನಿರ್ವಹಣೆಯ ಕೊರತೆಯಿಂದ ಇದೀಗ ಅವನತಿಯತ್ತ ಸಾಗಿದ್ದು, ಸಾಹಿತ್ಯ ಪ್ರೇಮಿಗಳ ನೋವಿಗೆ ಕಾರಣವಾಗಿದೆ.

ಬದಿಯಡ್ಕ ಗ್ರಾಮ ಪಂಚಾಯತಿಯ ಕೂಗಳತೆಯ ದೂರದಲ್ಲಿ, ಬದಿಯಡ್ಕ-ಯೇತಡ್ಕ ರಸ್ತೆಯ ಬಲಬದಿಯಲ್ಲಿ ಸುಮಾರು 3 ಸೆಂಟ್ ಭೂಮಿಯಲ್ಲಿದ್ದ ಹಳೆಯ ಲೈಬ್ರರಿಗೆ ಕಯ್ಯಾರರ ಜನ್ಮ ಶತಮಾನೋತ್ಸವದ ಸಂದರ್ಭ(2015) ಮರು ನಾಮಕರಣಗೈದು ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ಗ್ರಂಥಾಲಯ-ವಾಚನಾಲಯ ಎಂದು ನಾಮಕರಣಗೊಳಿಸಿದ್ದಲ್ಲದೆ ಬೇರೆ ಯಾವುದೇ ಉಪಕ್ರಮಗಳನ್ನು ಬದಿಯಡ್ಕ ಗ್ರಾ.ಪಂ. ಆಡಳಿತ ನಡೆಸದಿರುವುದು ಇದೀಗ ತೀವ್ರ ಸಮಸ್ಯೆಗೆ ಕಾರಣವಾಗಿದೆ. ಸುಸಜ್ಜಿತ ಕಟ್ಟಡ ಮಳೆಗೆ ಸೋರುತ್ತಿದೆ. ಪುಸ್ತಕಗಳನ್ನು ಪೇರಿಸಿ ಇರಿಸುವ  ಕಪಾಟುಗಳು ಹಳತಾಗಿ ನಾಶದ ಹಂತದಲ್ಲಿದೆ. ಜೊತೆಗೆ ಪುಸ್ತಕಗಳೂ ಹಾನಿಗೊಳಗಾಗಿವೆ. 

ಗ್ರಂಥಾಲಯದ ಮುಂಭಾಗ ಸಾಕಷ್ಟು ಸ್ಥಳಾವಕಾಶವಿದ್ದು, ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಆಯೋಜಿಸುವಷ್ಟು ಸ್ಥಳಾವಕಾಶವಿದೆ. ಅಲ್ಲಿ ಇದೀಗ ಖಾಸಗೀ ವ್ಯಕ್ತಿಗಳು ಸಿಮೆಂಟ್ ಟ್ಯಾಂಕ್ ಗಳನ್ನು ನಿರ್ಮಿಸಿ ಒಣಗಿಸಲಿರುವ ಸ್ಥಳವಾಗಿ ಪರಿವರ್ತಿಸಿರುವುದು ಖೇದಕರ.


ಗ್ರಂಥಾಲಯದ ಬಗ್ಗೆ:

ಬದಿಯಡ್ಕ ಗ್ರಾ.ಪಂ. ಆಡಳಿತಕ್ಕೊಳಪಟ್ಟ ಈ ಗ್ರಂಥಾಲಯ(ಸರ್ಕಾರಿ ಗ್ರಂಥಾಲಯ) ದಶಕಗಳಿಂದ ಕಾರ್ಯನಿರ್ವಹಿಸುತ್ತಿತ್ತು. ಬಳಿಕ 2015ರಲ್ಲಿ ಆಗಿನ ಆಡಳಿತ ಸಮಿತಿ ಕಯ್ಯಾರರ ಜನ್ಮ ಶತಮಾನೋತ್ಸವದ ಸಂದರ್ಭ ಗ್ರಂಥಾಲಯವನ್ನು ನವೀಕರಿಸಿ ಕಯ್ಯಾರರ ಹೆಸರನ್ನಿರಿಸಿತು. ಕಯ್ಯಾರರ ಹೆಸರನ್ನಿರಿಸಿದ್ದಷ್ಟೇ ಅಲ್ಲದೆ ಗ್ರಂಥಾಲಯದ ನಿತ್ಯ ನಿರ್ವಹಣೆಗೆ ಗ್ರಂಥಪಾಲಕರನ್ನಾಗಲಿ, ಇತರ ನಿರ್ವಹಣೆಗಿರುವ ವೆಚ್ಚಗಳನ್ನಾಗಲಿ ಮಾಡದೆ ಅವನತಿಗೆ ಕಾರಣವಾಯಿತು.


ಪುಸ್ತಕಗಳು ಮಾಯ:

ಹಿರಿಯರು ನೆನಪಿಸುವಂತೆ ಈ ಗ್ರಂಥಾಲಯದಲ್ಲಿ ಹಿಂದೆ ಸಾವಿರಾರು ಪುಸ್ತಕಗಳಿದ್ದವು. ಆದರೆ ಇದೀಗ ಅದು ನೂರರ ಹತ್ತಿರ ತಲುಪಿದೆ. ಮಿಕ್ಕುಳಿದ ಪುಸ್ತಕಗಳ ಗತಿ ಏನೆಂಬುದು ಯಾರಿಗೂ ತಿಳಿದಿಲ್ಲ. ರಿಜಿಸ್ಟರ್ ಪುಸ್ತಕಗಳೂ ಇಲ್ಲಿಲ್ಲ. ಹಳೆಯ ಕೆಲವು ಪುಸ್ತಕಗಳು ಅಧೋಗತಿಯ ಸ್ಥಿತಿಯಲ್ಲಿ ಪುಟ ತೆರೆದು ನೋಡಲು ಸಾಧ್ಯವಾಗದ ರೀತಿಯಲ್ಲಿವೆ. 


ಪೀಠೋಪಕರಣ ಮಾಯ:

ಪುಸ್ತಕಗಳನ್ನಿರಿಸುವ ಹಳೆಯ ಮೂರು ಕವಾಟುಗಳಷ್ಟೇ ಇಲ್ಲಿವೆ. ಮಿಕ್ಕುಳಿದಂತೆ ವಿಶಾಲ ಗ್ರಂಥಾಲಯ ಮೇಜು ಕುರ್ಚಿಗಳಿಲ್ಲದೆ ಢಾಳಾಗಿ ನಗುತ್ತಿದೆ. ಸಂಪೂರ್ಣ ಧೂಳು ಹಿಡಿದಿರುವ ಕಟ್ಟಡ ಸ್ಮಶಾನದಂತೆ ಗೋಚರಿಸುತ್ತಿದೆ.

ಭರವಸೆಯಾದ ಹೊಸ ಸಮಿತಿ:

ಇದೀಗ ಗ್ರಂಥಾಲಯ ನಿರ್ವಹಣೆಯ ಉದ್ದೇಸಗಳೊಂದಿಗೆ ನೂತನ ಸಮಿತಿಯೊಂದು ರೂಪುಗೊಂಡಿದ್ದು, ಕಯ್ಯಾರರ ಬದುಕು-ಬರಹಗಳಿಗೆ ನೆಲೆಯಾಗಿದ್ದ ಬದಿಯಡ್ಕ ಗ್ರಾ.ಪಂ.ನ ಈ ಗ್ರಂಥಾಲಯಕ್ಕೆ ಹೊಸ ರೂಪು ನೀಡುವ ಉದ್ದೇಶಗಳೊಂದಿಗೆ ಮುಂದೆ ಬಂದಿದೆ.


ಅಭಿಮತ:

-ಅವನತಿಯ ಸ್ಥಿತಿಯಲ್ಲಿರುವ ಗ್ರಂಥಾಲಯವನ್ನು ಮತ್ತೆ ಪುನಶ್ಚೇತನಗೊಳಿಸಲು ಹೊಸ ಕಾರ್ಯಕಾರಿ ಸಮಿತಿಯನ್ನು ಗ್ರಾ.ಪಂ. ಕಾರ್ಯದರ್ಶಿಗಳು ಸ್ವಆಸಕ್ತಿಯಿಂದ ರಚಿಸಿರುವರು. ಮೊದಲ ಹಂತದಲ್ಲಿ ಪೆರಡಾಲ ನವಜೀವನ ಶಾಲಾ ಎನ್.ಎಸ್.ಎಸ್.ವಿದ್ಯಾರ್ಥಿಗಳನ್ನು ಬಳಸಿ ಗ್ರಂಥಾಲಯದ ಒಳಗೆ ಹಾಗೂ ಹೊರಗೆ ಸ್ವಚ್ಚಗೊಳಿಸಲಾಗಿದೆ. ಮುಂದಿನ ಹಂತದಲ್ಲಿ ಪುಸ್ತಕಗಳನ್ನು ವಿವಿಧಡೆಗಳಿಂದ ಸಂಗ್ರಹಿಸಿ ತಂದಿರಿಸಲಾಗುವುದು. ಜೊತೆಗೆ ಗ್ರಾ.ಪಂ.ಯೋಜನಾ ಮೊತ್ತ ಬಳಸಿ ಪೀಠೋಕರಣ, ಪೈಂಟಿಂಗ್ ಮೊದಲಾದ ಪ್ರಾಥಮಿಕ ಆವಶ್ಯಕತೆಗಳನ್ನು ಪೂರೈಸಲು ಪ್ರಯತ್ನಿಸಲಾಗುವುದು. 

-ರಾಜೀವ್ ಮಾಸ್ತರ್.

ಅಧ್ಯಾಪಕರು ನವಜೀವನ ಶಾಲೆ ಪೆರಡಾಲ ಹಾಗೂ ಅಧ್ಯಕ್ಷರು ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ಗ್ರಂಥಾಲಯ-ವಾಚನಾಲಯ ಬದಿಯಡ್ಕ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries