ಕುಂಬಳೆ: ಸಮಾಜ ಸುಸ್ಥಿರತೆಗೆ ಬೆಂಗಾವಲು ಒದಗಿಸುವ ಪೋಲೀಸರೇ ಸಮಾಜ ದ್ರೋಹಿಗಳೊಂದಿಗೆ ಕೈಜೋಡಿಸಿದ್ದಾರೆ. ಕುಂಬಳೆ ಪೋಲೀಸ್ ಠಾಣೆಯಲ್ಲಿ ಮಾಫಿಯಾ ಹಣ ಬಳಸಿ ವಿವಿಧ ನವೀಕರಣ ಕಾಮಗಾರಿಗಳನ್ನು ನಡೆಸುತ್ತಿರುವ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತ ಎನ್. ಕೇಶವ ನಾಯಕ್ ಅವರು ಕುಂಬಳೆ ಪ್ರೆಸ್ ಪೋರಂನಲ್ಲಿ ಗುರುವಾರ ಸಂಜೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಈ ಸಂಬಂಧ ವ್ಯಾಪಕ ದೂರುಗಳು ಕೇಳಿಬರುತ್ತಿರುವುದರಿಂದ, ಸಂಬಂಧಪಟ್ಟವರು ಮಾಹಿತಿ ಹಕ್ಕು ಕಾಯ್ದೆಯಡಿ ಸ್ಪಷ್ಟೀಕರಣಕ್ಕಾಗಿ ಪ್ರಶ್ನೆಗಳಿಗೆ ಉತ್ತರಿಸುವುದನ್ನು ತಪ್ಪಿಸುತ್ತಿದ್ದಾರೆ.
ಪೋಲೀಸ್ ಠಾಣೆಯ ನವೀಕರಣದ ಭಾಗವಾಗಿ, ಅಕ್ರಮ ವಿಧಾನಗಳ ಮೂಲಕ ನಡೆಸಲಾದ ನಿರ್ಮಾಣ ಕಾರ್ಯಗಳಲ್ಲಿ ಅಂಗಳಕ್ಕೆ ಟೈಲಿಂಗ್, ಬಣ್ಣ ಬಳಿಯುವುದು, ಸುತ್ತುಗೋಡೆ, ಛಾವಣಿ ದುರಸ್ತಿ ಮತ್ತು ಶೆಡ್ ನಿರ್ಮಾಣ ಮುಂದಾದವುಗಳನ್ನು ನಡೆಸಿದ್ದಾರೆ ಎಂದವರು ಆರೋಪಿಸಿದರು.
ಈ ಎಲ್ಲದಕ್ಕೂ ಹಣ ಸಂಗ್ರಹವನ್ನು ಮಣ್ಣು, ಮುಟ್ಕಾ ಮತ್ತು ಮರದ ಮಾಫಿಯಾಗಳಿಂದ ಠಾಣೆಯ ವ್ಯಾಪ್ತಿಯಲ್ಲಿರುವ ಇಬ್ಬರು ಕೈಗಾರಿಕೋದ್ಯಮಿಗಳಿಂದ ಪಡೆಯಲಾಗಿದೆ.
ವಿವಾದದ ಹೊರತಾಗಿಯೂ, ಪೋಲೀಸರು ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದವರು ತಿಳಿಸಿದರು.
ಹಣ ಪಡೆದ ಮಾಫಿಯಾ ಮುಖ್ಯಸ್ಥರು ಮತ್ತು ಕೈಗಾರಿಕೋದ್ಯಮಿಗಳನ್ನು ಠಾಣೆಗೆ ಆಹ್ವಾನಿಸಿ ಅದ್ಧೂರಿ ಸಮಾರಂಭದ ಮೂಲಕ ಈ ಕಾಮಗಾರಿಗಳ ಉದ್ಘಾಟನೆಯನ್ನು ಇತ್ತೀಚೆಗೆ ನಡೆಸಲಾಗಿತ್ತು. ಆದಾಗ್ಯೂ, ಇದು ಪೋಲೀಸ್ ಅಧಿಕಾರಿಯೊಬ್ಬರಿಗೆ ಬೀಳ್ಕೊಡುಗೆ ಸಮಾರಂಭ ಎಂದು ಪೋಲೀಸರು ಬಿಂಬಿಸಿದರು. ಇದು ಶುದ್ಧ ಸುಳ್ಳು, ಮತ್ತು ಈ ವಿಷಯದ ಬಗ್ಗೆ ಎರಡು ಬಾರಿ ಮಾಹಿತಿ ಕೋರಿದ್ದರೂ, ಪ್ರತಿಕ್ರಿಯೆಯಲ್ಲಿ ಸ್ಪಷ್ಟತೆ ಇಲ್ಲ ಎಂದವರು ದಾಖಲೆಗಳನ್ನು ಪ್ರದರ್ಶಿಸಿದರು.
ಇವೆಲ್ಲ, ಕುಂಬಳ ಪೋಲೀಸ್ ಠಾಣೆಯ ಚಟುವಟಿಕೆಗಳನ್ನು ಮಾಫಿಯಾ ನಿಯಂತ್ರಿಸುತ್ತದೆ ಎಂಬುದನ್ನು ಪ್ರತಿಬಿಂಬಿಸಿದೆ. ಒಳಯಂನಲ್ಲಿ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ವ್ಯಾಪಕ ದೂರುಗಳು ಬಂದರೂ, ಪೋಲೀಸರು ಕ್ರಮ ಕೈಗೊಳ್ಳಲು ಸಿದ್ಧರಾಗಿಲ್ಲ. ಕುಂಬಳೆ ನಗರದಲ್ಲಿ ಪೋಲೀಸ್ ಠಾಣೆಯ ಮೂಗಿನ ಕೆಳಗೆ ಮಟ್ಕಾ ಜೂಜಾಟ ನಡೆಯುತ್ತಿದೆ. ಪೋಲೀಸರು ಇದನ್ನೂ ನೋಡದಂತೆ ನಟಿಸುತ್ತಿದ್ದಾರೆ. ಸಾರ್ವಜನಿಕ ವಲಯದ ಸಂಸ್ಥೆಯ ಸೋಗಿನಲ್ಲಿ ಪೋಲೀಸರ ಮೌನ ಒಪ್ಪಿಗೆಯೊಂದಿಗೆ ಇತರ ರಾಜ್ಯಗಳಿಗೆ ಮಣ್ಣನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಕೇಶವ ನಾಯಕ್ ಆರೋಪಿಸಿದರು. ಈ ಸಂಬಂಧ ಮುಖ್ಯಮಂತ್ರಿ ಮತ್ತು ಡಿಜಿಪಿಗೆ ದೂರು ನೀಡುವುದಾಗಿ ಅವರು ಹೇಳಿದರು.




.jpg)
