ಬೆಕ್‌ಹ್ಯಾಮ್: ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಕ್ರಿಕೆಟ್ ಜಗತ್ತು ಮರುಕ ವ್ಯಕ್ತಪಡಿಸಿದೆ.
ಐದು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ ಸಲುವಾಗಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ತಂಡ, ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಸೆಣಸಾಟ ನಡೆಸುತ್ತಿರುವ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಆಟಗಾರರು ಒಂದು ನಿಮಿಷ ಮೌನಾಚರಣೆ ನಡೆಸುವ ಮೂಲಕ ಮೃತರಿಗೆ ಗೌರವ ಸಲ್ಲಿಸಿದ್ದಾರೆ.
ಅಹಮದಾಬಾದ್‌ನ ಸರ್ದಾರ್ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನತ್ತ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಗುರುವಾರ (ಜೂನ್ 12ರಂದು) ಮಧ್ಯಾಹ್ನ 1.39ಕ್ಕೆ ಟೇಕ್ ಆಫ್ ಆಗಿತ್ತು. ಆದರೆ, 25 ಸೆಕೆಂಡ್‌ಗಳಲ್ಲೇ ಪತನಗೊಂಡು ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದಿತ್ತು.
ವಿಮಾನದಲ್ಲಿದ್ದ ಸಿಬ್ಬಂದಿ ಸೇರಿದಂತೆ 242 ಮಂದಿ ಇದ್ದರು. ಒಬ್ಬರಷ್ಟೇ ಬದುಕುಳಿದು ಉಳಿದೆಲ್ಲರೂ ಮೃತಪಟ್ಟಿದ್ದಾರೆ. ಅಷ್ಟಲ್ಲದೆ, ಹಾಸ್ಟೆಲ್‌ನಲ್ಲಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ.
ಬೆಕ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯಕ್ಕೂ ಮುನ್ನ ಮೌನಾಚರಣೆ ಮಾಡಿರುವ ಟೀಂ ಇಂಡಿಯಾ, ತೋಳಿಗೆ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದೆ.
'ಬೆಕ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಇಂಟ್ರಾ ಸ್ಕ್ವಾಡ್ ಅಭ್ಯಾಸ ಪಂದ್ಯಕ್ಕೂ ಮುನ್ನ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ, ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಗೌರವ ಸಲ್ಲಿಸಲು ಹಾಗೂ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬದವರ ಪರ ಒಗ್ಗಟ್ಟನ್ನು ಸಾರುವ ಸಲುವಾಗಿ ತೋಳಿಗೆ ಕಪ್ಪು ಪಟ್ಟಿ ಧರಿಸಿ, ಒಂದು ನಿಮಿಷ ಮೌನಾಚರಣೆಯಲ್ಲಿ ಭಾಗವಹಿಸಿದ್ದಾರೆ' ಎಂದು ಬಿಸಿಸಿಐ ತಿಳಿಸಿದೆ.
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಂದ್ಯ ಮೂರನೇ ದಿನದಾಟ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಆಟಗಾರರೂ ಮೌನಾಚರಣೆ ಮಾಡಿದ್ದಾರೆ.
ಆಟಗಾರರು ಕಪ್ಪು ಪಟ್ಟಿ ಧರಿಸಿರುವ ವಿಡಿಯೊವನ್ನು ಐಸಿಸಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.
ಭಾರತ ತಂಡದ ಕೋಚ್ ಗೌತಮ್ ಗಂಭೀರ್, ಟೆಸ್ಟ್ ನಾಯಕ ಶುಭಮನ್ ಗಿಲ್, ಹಿರಿಯ ಆಟಗಾರ ರವಿಂದ್ರ ಜಡೇಜ, ಅನುಭವಿ ಕೆ.ಎಲ್. ರಾಹುಲ್ ಸಾಮಾಜಿಕ ಮಾಧ್ಯಮಗಳಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ.
ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಸೇರಿದಂತೆ ಹಲವರುು, ಹೃದಯ ವಿದ್ರಾವಕ ದುರಂತ ಎಂದು ಟ್ವೀಟ್ ಮಾಡಿದ್ದಾರೆ.




