HEALTH TIPS

ಮಹಾಘಟಬಂಧನದಲ್ಲಿ ಗೊಂದಲಗಳಿಲ್ಲ, ತೇಜಸ್ವಿಯೇ ಮುಖ್ಯಮಂತ್ರಿ ಅಭ್ಯರ್ಥಿ: ಕನ್ಹಯ್ಯ

ನವದೆಹಲಿ: ಮುಂಬರಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು 'ಮಹಾಘಟಬಂಧನ' ಮೈತ್ರಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಕಾಂಗ್ರೆಸ್‌ ನಾಯಕ ಕನ್ಹಯ್ಯ ಕುಮಾರ್‌ ತಿಳಿಸಿದರು.

'ಮಹಾಘಟಬಂಧನ' ಬಹುಮತ ಪಡೆದರೆ ಮುಖ್ಯಮಂತ್ರಿ ಸ್ಥಾನ ಆರ್‌ಜೆಡಿ ಪಕ್ಷದ ಪಾಲಾಗಲಿದೆ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಸಾರ್ವತ್ರಿಕ ಚುನಾವಣೆಗಳಲ್ಲಿ ಜನರ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯ ಪ್ರಮುಖವಾಗಿ ಚರ್ಚೆಯಾಗಬೇಕೇ ಹೊರತು ಮುಖ್ಯಮಂತ್ರಿ ಸ್ಥಾನದ ವಿಷಯವಲ್ಲ. ಆದರೆ ಪ್ರತಿಸ್ಪರ್ಧಿಗಳು ಜನರ ಗಮನ ಬೇರೆಡೆ ಸೆಳೆಯಲು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಆದರೆ ಈ ಪಿತೂರಿ ನಡೆಯುವುದಿಲ್ಲ ಎಂದು ಅವರು ತಿಳಿಸಿದರು.

ಒಂದು ವೇಳೆ ಬಿಜೆಪಿಗೆ ಅಧಿಕಾರ ದೊರೆತರೆ ಅವರು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ಬದಲಿಸಿ, ತಮ್ಮ ನಾಯಕನನ್ನು ಆ ಸ್ಥಾನದಲ್ಲಿ ಕೂರಿಸುತ್ತಾರೆ. ಬಿಜೆಪಿ ಯಾವಾಗಲೂ, ಮೊದಲಿಗೆ ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ ನೀಡಿ, ಕ್ರಮೇಣ ಅವುಗಳನ್ನು ನುಂಗಿ ಬಿಡುತ್ತದೆ ಎಂದು ಅವರು ಆರೋಪಿಸಿದರು.

ದೊಡ್ಡ ಪಕ್ಷಕ್ಕೆ ಹೆಚ್ಚಿನ ಜವಾಬ್ದಾರಿ

ಬಿಹಾರದಲ್ಲಿ ಮಹಾಘಟಬಂಧನ ಮೈತ್ರಿಯಲ್ಲಿ ಹೆಚ್ಚು ಶಾಸಕರನ್ನು ಹೊಂದಿರುವ ಆರ್‌ಜೆಡಿ ಸಹಜವಾಗಿಯೇ ದೊಡ್ಡ ಪಕ್ಷವಾಗಿದೆ. ಪ್ರಸ್ತುತ ವಿರೋಧ ಪಕ್ಷದ ನಾಯಕರೂ ಆರ್‌ಜೆಡಿಯವರೇ ಆಗಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯುವ ನಿಟ್ಟಿನಲ್ಲಿ ಅವರ ಮೇಲೆ ಜವಾಬ್ದಾರಿ ಹೆಚ್ಚಿರುತ್ತದೆ ಎಂದು ಅವರು ಪ್ರತಿಪಾದಿಸಿದರು.

ಬಿಹಾರದ 243 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷ ಎಷ್ಟರಲ್ಲಿ ಸ್ಪರ್ಧಿಸುತ್ತದೆ ಎಂಬ ಪ್ರಶ್ನೆಗೆ, 'ಮಹಾಘಟಬಂಧನ'ದ ಭಾಗವಾಗಿ ಕಾಂಗ್ರೆಸ್‌ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಒಗ್ಗಟ್ಟಿನಿಂದ ಸ್ಪರ್ಧೆ ಮಾಡುತ್ತದೆ ಎಂದು ಪ್ರತಿಕ್ರಿಯಿಸಿದರು

'ಆರ್‌ಜೆಡಿ, ಕಾಂಗ್ರೆಸ್‌, ಎಡ ಪಕ್ಷಗಳು ಮತ್ತು ಮುಕೇಶ್‌ ಸಹಾನಿ ಅವರ ವಿಕಾಸಶೀಲ ಇನ್ಸಾನ್‌ ಪಕ್ಷಗಳ ಅಭ್ಯರ್ಥಿಗಳು ಒಗ್ಗಟ್ಟಿನಿಂದ 243 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಯಾರು ಮುಖ್ಯಮಂತ್ರಿ ಆಗಬೇಕು ಎಂಬುದನ್ನು ಜನರು ನಿರ್ಧರಿಸುತ್ತಾರೆ. ಸಹಜವಾಗಿಯೇ ಮೈತ್ರಿ ಪಕ್ಷಗಳ ಪೈಕಿ ಆರ್‌ಜೆಡಿ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಹೀಗಾಗಿ ಅದು ಮುಖ್ಯಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪೇನೂ ಇಲ್ಲ' ಎಂದು ಅವರು ಉತ್ತರಿಸಿದರು.

'ಮಹಾಘಟಬಂಧನದಲ್ಲಿ ಮುಖ್ಯಮಂತ್ರಿ ಸ್ಥಾನದ ಆಯ್ಕೆಯ ಪ್ರಕ್ರಿಯೆಯು ಸ್ವಯಂಚಾಲಿತವಾಗಿ ನಡೆಯುತ್ತದೆ, ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ನಿತೀಶ್‌ ಕುಮಾರ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಬೇಕೋ, ಬೇಡವೋ ಎಂಬ ಗೊಂದಲದಲ್ಲಿ ಎನ್‌ಡಿಎ ಇದೆ. ಅಂಥೆಯೇ ಎನ್‌ಡಿಎಯಲ್ಲಿ ಯಾವ ಪಕ್ಷಗಳು ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎಂಬುದೂ ಸ್ಪಷ್ಟವಿಲ್ಲ' ಎಂದು ಹೇಳಿದರು. ಗೊಂದಲ ಇರುವುದು ಎನ್‌ಡಿಎಯಲ್ಲಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries