HEALTH TIPS

ನೀವು ಮಾತಾಡಬೇಡಿ, ನಾನು ಮಾತಾಡಲೇಬೇಕು; ಅಮೆರಿಕದಲ್ಲಿ ತಂದೆ ಶಶಿ ತರೂರ್‌, ಮಗ ಇಶಾನ್‌ ತರೂರ್‌ ಜುಗಲ್‌ಬಂದಿ!

ನ್ಯೂಯಾರ್ಕ್‌: ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಮತ್ತು ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲದ ಸತ್ಯವನ್ನು ಜಗತ್ತಿಗೆ ಮನವರಿಕೆ ಮಾಡಲು ತೆರಳಿರುವ ಭಾರತದ ಏಳು ಸರ್ವಪಕ್ಷ ಸಂಸದೀಯ ನಿಯೋಗಗಳು ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿವೆ. ಈ ಪೈಕಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ನೇತೃತ್ವದ ಸಂಸದೀಯ ನಿಯೋಗ ಇನ್ನೂ ಅಮೆರಿಕದಲ್ಲೇ ಇದ್ದು, ಈ ವೇಳೆ ತಮ್ಮ ಪತ್ರಕರ್ತ ಪುತ್ರನ ಪ್ರಶ್ನೆಗೆ ಉತ್ತರಿಸಿದ ಅಪರೂಪದ ಪ್ರಸಂಗ ನಡೆದಿದೆ.

ಹೌದು. ಅಮೆರಿಕದ ನ್ಯೂಯಾರ್ಕ್‌ನಲ್ಲಿ ಭಾರತದ ಸರ್ವಪಕ್ಷ ಸಂಸದೀಯ ನಿಯೋಗದ ಪತ್ರಿಕಾಗೋಷ್ಠಿ ನಡೆಯುತ್ತಿತ್ತು. ಈ ವೇಳೆ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಪತ್ರಕರ್ತರಾಗಿರುವ ಶಶಿ ತರೂರ್‌ ಪುತ್ರ ಇಶಾನ್‌ ತರೂರ್‌, ಪ್ರಶ್ನೆ ಕೇಳಲು ಎದ್ದು ನಿಂತರು. ಕೂಡಲೇ ಶಶಿ ತರೂರ್‌ ಅವರು, "ಬೇಡ ಬೇಡ, ಈತ ನನ್ನ ಮಗ" ಎಂದು ನಗುತ್ತಲೇ ಹೇಳಿದರು.

ಇದಕ್ಕೆ "ನಾನು ಇಶಾನ್‌ ತರೂರ್‌, ವಾಷಿಂಗ್ಟನ್‌ ಪೋಸ್ಟ್‌ನಿಂದ" ಎಂದು ಶಶಿ ತರೂರ್‌ ಅವರ ಮಗ ಹೇಳುತ್ತಲೇ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಎಲ್ಲರೂ ಜೋರಾಗಿ ನಕ್ಕರು. ಆ ಬಳಿಕ ಇಶಾನ್‌ ತರೂರ್‌ ತಮ್ಮ ತಂದೆಗೆ ಹಲವು ಕಠಿಣ ಪ್ರಶ್ನೆಗಳನ್ನು ಕೇಳಿದರು.


"ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಇದೆ ಎಂಬುದಕ್ಕೆ ಸಾಕ್ಷಿ ಕೊಡಿ ಎಂದು ಯಾವುದಾದರೂ ದೇಶ ಭಾರತದ ಸರ್ವಪಕ್ಷ ಸಂಸದೀಯ ನಿಯೋಗವನ್ನು ಕೇಳಿದೆಯಾ?" ಎಂದು ಇಶಾನ್‌ ತರೂರ್‌ ಅವರು ಶಶಿ ತರೂರ್‌ ಅವರಿಗೆ ಪ್ರಶ್ನೆ ಕೇಳಿದರು. ಮುಂದುವರೆದು, "ಪಾಕಿಸ್ತಾನ ಪಹಲ್ಗಾಮ್‌ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ವಾದಿಸುತ್ತಿದ್ದು, ಈ ವಾದ ಸುಳ್ಳು ಎಂದು ಸಾಬೀತುಪಡಿಸಲು ಭಾರತ ಹೇಗೆ ತಯಾರಿ ಮಾಡಿಕೊಂಡಿದೆ?" ಎಂದು ಿಶಾನ್‌ ತರೂರ್‌ ತಮ್ಮ ತಂದೆ ಶಶಿ ತರೂರ್‌ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸುವ ಮೊದಲು, "ನಾನು ಅವನನ್ನು ಇಲ್ಲಿ ತಂದು ಕೂರಿಸಿಲ್ಲ. ಆತ ಓರ್ವ ಪತ್ರಕರ್ತನಾಗಿದ್ದು, ಅತ್ಯಂತ ಸೂಕ್ತವಾದ ಪ್ರಶ್ನೆ ಕೇಳಿದ್ದಾನೆ" ಎಂದು ಭಾರತೀಯ ನಿಯೋಗದ ಸದಸ್ಯ ಶಶಿ ತರೂರ್‌ ತಮ್ಮ ಮಗ ಇಶಾನ್‌ ತರೂರ್‌ ಅವರನ್ನು ಉಲ್ಲೇಖಿಸಿ ಸ್ಪಷ್ಟನೆ ನೀಡಿದರು.

ಇದಾದ ನಂತರ ಇಶಾನ್‌ ತರೂರ್‌ ಅವರ ಪ್ರಶ್ನೆಗೆ ಉತ್ತರಿಸಿದ ಶಶಿ ತರೂರ್‌, "ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿರುವುದನ್ನು, ಭಾರತದ ಏಳು ಸರ್ವಪಕ್ಷ ಸಂಸದೀಯ ನಿಯೋಗಗಳು ಜಗತ್ತಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿವೆ" ಎಂದು ಹೇಳಿದರು.

"ಪಹಲ್ಗಾಮ್‌ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿರುವುದಕ್ಕೆ ಸಾಕ್ಷಿ ಕೊಡಿ ಎಂದು ಯಾವ ದೇಶವೂ ನಮ್ಮನ್ನು ಕೇಳಿಲ್ಲ. ಏಕೆಂದರೆ ಯಾವ ದೇಶಕ್ಕೂ ಈ ಕುರಿತು ಅನುಮಾನವಿಲ್ಲ. ನಾವು ಭೇಟಿ ನೀಡಿದ ಎಲ್ಲ ದೇಶಗಳೂ, ಭಯೋತ್ಪಾದನೆ ವಿರುದ್ದದ ಭಾರತ ಹೋರಾಟಕ್ಕೆ ರಾಜತಾಂತ್ರಿಕ ಬೆಂಬಲ ನೀಡಲು ಒಪ್ಪಿಕೊಂಡಿವೆ. ಇದು ಭಾರತದ ರಾಜತಾಂತ್ರಿಕ ಜಯ ಎಂಬುದನ್ನು ನಾನು ಸ್ಪಷ್ಟವಾಗಿ ಹೇಳಬಯಸುತ್ತೇನೆ" ಎಂದು ಶಶಿ ತರೂರ್‌ ಅವರು ತಮ್ಮ ಪುತ್ರ ಇಶಾನ್‌ ತರೂರ್‌ ಅವರ ಪ್ರಶ್ನೆಗೆ ಉತ್ತರಿಸಿದರು.

ಒಟ್ಟಿನಲ್ಲಿ ಅಮೆರಿಕದಲ್ಲಿ ಶಶಿ ತರೂರ್‌ ಮತ್ತು ಪುತ್ರ ಇಶಾನ್‌ ತರೂರ್‌ ನಡುವೆ ನಡೆದ ಚರ್ಚೆ ಇದೀಗ ಭಾರತೀಯರ ಗಮನ ಸೆಳೆದಿದ್ದು, "ನನ್ನ ಮಗನಿಗೆ ಮಾತನಾಡಲು ಅವಕಾಶ ಮಾಡಿ ಕೊಡಬೇಡಿ" ಎಂಬ ಶಶಿ ತರೂರ್‌ ಹೇಳಿಕೆಗೆ, ಹಲವು ನೆಟ್ಟಿಗರು "ಇದು ಅಪ್ಪಟ ಭಾರತೀಯ ತಂದೆಯ ವರ್ತನೆ" ಎಂದು ಹಾಸ್ಯಭರಿತ ಧಾಟಿಯಲ್ಲಿ ಕಾಲೆಳೆದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries