HEALTH TIPS

ಬಾಂಗ್ಲಾದೇಶ: ಏಪ್ರಿಲ್‌ನಲ್ಲಿ ಚುನಾವಣೆಗೆ ಬಿಎನ್‌ಪಿ ವಿರೋಧ

ಢಾಕಾ: 'ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಯನ್ನು 2026ರ ಏಪ್ರಿಲ್‌ನಲ್ಲಿ ನಡೆಸಲಾಗುವುದು ಎಂದು ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನಸ್‌ ಮಾಡಿರುವ ಘೋಷಣೆಯಿಂದ ದೇಶದ ಜನರು ನಿರಾಸೆಗೊಂಡಿದ್ದಾರೆ' ಎಂದು ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ) ಹೇಳಿದೆ.

ಇದೇ ವರ್ಷದ ಡಿಸೆಂಬರ್‌ನಲ್ಲಿ ಚುನಾವಣೆ ನಡೆಸಬೇಕು ಎಂದು ಬಿಎನ್‌ಪಿ ಒತ್ತಾಯಿಸಿದೆ.

'ವಿದ್ಯಾರ್ಥಿಗಳ ಮಹತ್ತರವಾದ ತ್ಯಾಗದ ಮೂಲಕ ದೇಶದ ಜನರಿಗೆ ಗೆಲುವು ಲಭಿಸಿದೆ. ಆದರೆ, ಚುನಾವಣೆಗೆ ಸಂಬಂಧಿಸಿದಂತೆ ಮಧ್ಯಂತರ ಸರ್ಕಾರದ ಅನವಶ್ಯಕ ವಿಳಂಬ ಮಾಡುತ್ತಿರುವುದು ಜನರನ್ನು ತೀವ್ರ ನಿರಾಸೆಗೆ ದೂಡಿದೆ' ಎಂದು ಬಿಎನ್‌ಪಿಯ ಹೇಳಿಕೆ ಉಲ್ಲೇಖಿಸಿ ಢಾಕಾ ಟ್ರಿಬ್ಯೂನ್‌ ವರದಿ ಮಾಡಿದೆ.

ರಂಜಾನ್‌ ಮಾಸ, 10ನೇ ತರಗತಿ ಮತ್ತು ಪದವಿಪೂರ್ವ ತರಗತಿಗಳ ಪರೀಕ್ಷೆ, ಪ್ರತಿಕೂಲ ಹವಾಮಾನ ಮತ್ತಿತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇದೇ ವರ್ಷದ ಡಿಸೆಂಬರ್‌ನಲ್ಲಿ ಚುನಾವಣೆ ನಡೆಸಬೇಕು ಎಂದು ಬಿಎನ್‌ಪಿ ಒತ್ತಾಯಿಸಿದೆ.

'ದೇಶದ ಜನರು ಸತತ ಹೋರಾಟದ ಮೂಲಕ ಗಳಿಸಿದ ಮತದಾನದ ಹಕ್ಕನ್ನು, ಅವರ ಆಶೋತ್ತರಗಳನ್ನು ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನಸ್‌ ಅವರು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಸುಮಾರು ಒಂದೂವರೆ ದಶಕದಿಂದ ಮತದಾನದ ಹಕ್ಕಿನಿಂದ ವಂಚಿತರಾಗಿದ್ದ ಜನರು ಚುನಾವಣೆಯ ಮೂಲಕ ಕಂಡಿದ್ದ ಪ್ರಜಾಪ್ರಭುತ್ವ ಮರುಸ್ಥಾಪನೆಯ ಕನಸು ಮರೆಯಾಗಿದೆ. ಜನರ ಪ್ರಾಥಮಿಕ ಮತದಾನದ ಹಕ್ಕನ್ನು ಕೊಲೆ ಮಾಡಲಾಗಿದೆ' ಎಂದು ಬಿಎನ್‌ಪಿ ಅಧ್ಯಕ್ಷ ತಾರಿಕ್‌ ರೆಹಮಾನ್‌ ಹೇಳಿದ್ದಾರೆ.

ಮಧ್ಯಂತರ ಸರ್ಕಾರವು ಏಪ್ರಿಲ್‌ನಲ್ಲಿ ಚುನಾವಣೆ ಘೋಷಣೆ ಮಾಡಿರುವುದರಿಂದ, ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಯುವ ಸಾಧ್ಯತೆ ಕುರಿತು ಜನರಲ್ಲಿ ಆತಂಕ ಇದೆ. ರಂಜಾನ್‌ ತಿಂಗಳಾಗಿರುವುದರಿಂದ ಸಭೆ, ರ್‍ಯಾಲಿ ಸೇರಿ ಚುನಾವಣಾ ಕಾರ್ಯಗಳಿಗೆ ತೊಡಕಾಗಲಿದೆ. ಪ್ರತಿಕೂಲ ಹವಾಮಾನ ಸೇರಿ ಇನ್ನಿತರ ಸವಾಲಗಳೂ ಎದುರಾಗಲಿವೆ' ಎಂದು ಬಿಎನ್‌ಪಿ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries