ನವದೆಹಲಿ: ಅಂತರರಾಷ್ಟ್ರೀಯ ಆಲೂಗಡ್ಡೆ ಕೇಂದ್ರದ(ಸಿಐಪಿ) ದಕ್ಷಿಣ ಏಷ್ಯಾ ಪ್ರಾದೇಶಿಕ ಕಚೇರಿಯನ್ನು ಆಗ್ರಾದಲ್ಲಿ ಆರಂಭಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಪೆರು ಮೂಲದ ಈ ಸಂಸ್ಥೆಯು ಆಲೂಗಡ್ಡೆ ಮತ್ತು ಗೆಣಸಿನ ಬಗ್ಗೆ ಸಂಶೋಧನೆ ನಡೆಸುತ್ತದೆ.
ಆಲೂಗಡ್ಡೆ ಬೆಳೆಯುವ ಪ್ರಮುಖ ರಾಜ್ಯಗಳಾದ ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ಮಾತ್ರವಲ್ಲದೇ ದಕ್ಷಿಣ ಏಷ್ಯಾದ ರಾಷ್ಟ್ರಗಳ ರೈತರಿಗೂ ಈ ಸಂಸ್ಥೆ ಸಹಕಾರಿಯಾಗಲಿದೆ.
ಪ್ರಸ್ತಾವಿತ ಕೇಂದ್ರಕ್ಕೆ ಉತ್ತರಪ್ರದೇಶ ಸರ್ಕಾರವು 10 ಹೆಕ್ಟೇರ್ ಜಮೀನು ನೀಡಿದೆ. ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಮೂಲಕ ಕೇಂದ್ರ ಸರ್ಕಾರವು ₹111 ಕೋಟಿ ಹೂಡಿಕೆ ಮಾಡಲಿದೆ.




