ನವದೆಹಲಿ: 'ಮುಂದಿನ ವರ್ಷ ಮೇ ಮತ್ತು ಜೂನ್ ಮಧ್ಯೆ ನಡೆಯಲಿರುವ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಚುನಾವಣೆಗೂ ಮುಂಚಿತವಾಗಿ ಈ ಐದು ರಾಜ್ಯಗಳ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸುತ್ತೇವೆ' ಎಂದು ಕೇಂದ್ರ ಚುನಾವಣಾ ಆಯೋಗ (ಸಿಇಸಿ) ಬುಧವಾರ ಹೇಳಿದೆ.
'ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ಚುನಾವಣೆಯ ಬಳಿಕ ಈ ಕಾರ್ಯ ಆರಂಭಿಸುತ್ತೇವೆ. ಆಯೋಗದ ಬೂತ್ ಮಟ್ಟದ ಸಿಬ್ಬಂದಿಯು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಮತದಾರರ ಪಟ್ಟಿಯು ವಿಶ್ವಾಸಾರ್ಹವಾಗಿ ಇರುವಂತೆ ನೋಡಿಕೊಳ್ಳುವ ಸಾಂವಿಧಾನಿಕ ಹೊಣೆಗಾರಿಕೆ ನಮ್ಮ ಮೇಲಿದೆ. ಆದ್ದರಿಂದ ಸಮಗ್ರ ಪರಿಶೀಲನೆಗೆ ಮುಂದಾಗಿದ್ದೇವೆ' ಎಂದಿದೆ.
'ಬಿಹಾರದಲ್ಲಿ ಚುನಾವಣೆ ಇರುವುದರಿಂದ ಈ ರಾಜ್ಯದ ಮತದಾರರ ಪಟ್ಟಿಯನ್ನು ತಕ್ಷಣವೇ ಸಮಗ್ರವಾಗಿ ಪರಿಶೀಲನೆ ಮಾಡುತ್ತೇವೆ' ಎಂದು ಆಯೋಗ ಹೇಳಿದೆ. 2003ರಲ್ಲಿ ಕೊನೆಯ ಬಾರಿಗೆ ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲನೆಗೆ ಒಳಪಡಿಸಲಾಗಿತ್ತು.
'ಅಕ್ರಮ ವಲಸಿಗರು ಮತದಾರರ ಪಟ್ಟಿಯಲ್ಲಿ ಸೇರಿಕೊಳ್ಳದಂತೆ ಕ್ರಮ ಕೈಗೊಳ್ಳಲಾಗುವುದು' ಎಂದು ಆಯೋಗ ಹೇಳಿದೆ. ಬಿಜೆಪಿಗೆ ಸಹಕಾರ ನೀಡಲು ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಹೊತ್ತಿನಲ್ಲಿಯೇ ಆಯೋಗವು ಈ ನಿರ್ಧಾರ ಕೈಗೊಂಡಿದೆ.




