ಕಾಸರಗೋಡು: ನಗರದ ತಳಂಗರೆ ಮಾಲಿಕ್‍ದೀನಾರ್ ಮಸೀದಿ ಸನಿಹದ ಕೆರೆಯಲ್ಲಿ ಸ್ನಾನಕ್ಕಿಳಿದ ಸಹೋದರರಲ್ಲಿ ಒಬ್ಬ ಮೃತಪಟ್ಟು, ಇನ್ನೊಬ್ಬನನ್ನು ಗಂಭೀರಾವ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ಘಟನೆ ನಡೆದಿದ್ದು, ಬೆಂಗಳೂರು ಡಿ.ಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಾನಿ ರಸ್ತೆ ನಿವಾಸಿ ಮುಜಾಹಿದ್ ಅವರ ಪುತ್ರ ಫೈಸಾನ್(22)ಮೃತಪಟ್ಟ ಯುವಕ. ಇವರ ಸಹೋದರ ಸಕ್ಲೀನ್(20)ಅವರನ್ನು ಗಂಭೀರಾವಸ್ಥೆಯಲ್ಲಿ ಸನಿಹದ ಮಾಲಿಕ್‍ದೀನಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಿಂದ ಕುಟುಂಬದ ಹನ್ನೊಂದು ಮಂದಿ ಸದಸ್ಯರೊಂದಿಗೆ ಕೇರಳ ಪ್ರವಾಸ ಆಗಮಿಸಿದ್ದ ಮುಜಾಹಿದ್, ಮಂಗಳವಾರ ಸಂಜೆ ತಳಂಗರೆಯ ಮಾಲಿಕ್‍ದೀನಾರ್ ಮಸೀದಿಗೆ ಭೇಟಿ ನೀಡಿ ಕೊಠಡಿ ಪಡದು ವಾಸ್ತವ್ಯ ಹೂಡಿದ್ದರು. ಬುಧವಾರ ಬೆಳಗ್ಗೆ ಸಹೋದರರು ಕೆರೆಗೆ ಸ್ನಾನಕ್ಕಿಳಿದಿದ್ದು, ಈ ಸಂದರ್ಭ ಸಕ್ಲೀನ್ ಆಯತಪ್ಪಿ ನೀರಿಗೆ ಬಿದ್ದಿದ್ದರು. ಇವರ ರಕ್ಷಣೆಗೆ ಮುಂದಾದ ಫೈಸಾನ್ ಕೂಡಾ ಮುಳುಗೇಳುತ್ತಿದ್ದರು. ಇದನ್ನು ಕಂಡು ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ನಡೆಇದ ಕಾರ್ಯಾಚರಣೆಯಿಂದ ಇಬ್ಬರನ್ನೂ ಮೇಲಕ್ಕೆತ್ತಿ ಸನಿಹದ ಆಸ್ಪತ್ರೆಗೆ ದಾಖಲಿಸಿದರೂ, ಫೈಸಾನ್ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ. ಸಕ್ಲೀನ್ ಚೇತರಿಸುತ್ತಿದ್ದಾರೆ.

