ಕಾಸರಗೋಡು: ಭಾರತಮಾತೆಯ ಬಗ್ಗೆ ಕೀಳಾಗಿ ಮಾತನಾಡಿರುವ ಕೇರಳದ ಶಿಕ್ಷಣ ಸಚಿವ ಶಿವನ್‍ಕುಟ್ಟಿ ಸೇರಿದಂತೆ ವಿವಿಧ ಮುಖಂಡರ ಹೇಳಿಕೆ ವಿರದ್ಧ ಕೇರಳಾದ್ಯಂತ ಬಿಜೆಪಿ ವತಿಯಿಂದ ಶನಿವಾರ ಭಾರತ ಮಾತಾ ಪೂಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಕರಂದಕ್ಕಾಡು ವಠಾರದಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಎಡರಂಗ ಮುಖಂಡರ ಕೀಳು ಮನೋಭಾವದ ವಿರುದ್ಧ ಪ್ರತಿಭಟನೆ ಸಲ್ಲಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತಾಂಬೆ ದೇಶದ ಏಕತೆ, ಸಾರ್ವಭೌಮತ್ವ ಮಾತ್ರವಲ್ಲಿ ವೀರ ಯೋಧರ ಶೌರ್ಯದ ಸಂಕೇತವೂ ಆಗಿದೆ. ಎಡರಂಗ ನೇತಾರರ ತುಷ್ಠೀಕರಣ ಧೋರಣೆಗೆ ಭಾರತಾಂಬೆಯನ್ನು ಕೀಳಾಗಿ ಚಿತ್ರಿಸುತ್ತಿರುವುದು ಖಂಡನೀಯ. ಎಡಪಂಥೀಯರು ಭಾರತೀಯ ನೆಲದ ವಿಚಾರಧಾರೆಗಿಂತ ಪಾಶ್ಚಾತ್ಯ ಆಶಯಗಳನ್ನು ಮೈಗೂಡಿಸಿಕೊಂಡು ಬಂದಿರುವುದರಿಂದ ಭಾರತಮಾತೆಯನ್ನು ಇಷ್ಟೊಂದುಕೀಳಾಗಿ ಕಾಣಲು ಕಾರಣವಾಘಿದೆ. ಭಾರತ ಮಾತೆಯನ್ನು ಕಾವಿ ಧ್ವಜ ಎತ್ತಿ ಹಿಡಿದ ಮಹಿಳೆ ಮಾತ್ರ ಆಗಿದ್ದಾಳೆ ಎಂಬುದಾಗಿ ಸಚಿವ ಶಿವನ್ ಕುಟ್ಟಿ ಹೇಳಿಕೆ ನೀಡುವ ಮೂಲಕ ಭಾತರಾಂಬೆ ಹಾಗೂ ಈ ನಾಡಿನ ವನಿತೆಯರಿಗೆ ಅಪಮಾನವೆಸಗಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್, ಜಿಲ್ಲಾ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಗಳಾದ ಅಶ್ವಿನಿ ಕೆ.ಎಂ, ಸಂಜೀವ ಪುಲ್ಕೂರು, ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಕಾಸರಗೋಡು ಮಂಡಲ ಸಮಿತಿ ಮಾಜಿ ಅಧ್ಯಕ್ಷ ಗುರುಪ್ರಸಾದ್ ಪ್ರಭು, ಬಗರಸಭಾ ಸದಸ್ಯ ಪಿ.ರಮೇಶ್, ಮಂಡಲ, ಪಂಚಾಯಿತಿ, ಪ್ರದೇಶ ಸಮಿತಿ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಹಾಗೂ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.





