ಕುಂಬಳೆ: ಅವ್ಯಾಹತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯಾದ್ಯಂತ ವ್ಯಾಪಕ ಪ್ರಮಾಣದ ನಾಶನಷ್ಟಗಳು ವರದಿಯಾಗುತ್ತಿದೆ. ನದಿ ಕೊಳ್ಳಗಳು ಉಕ್ಕೇರಿ ಹರಿಯುತ್ತಿದ್ದು ಅಪಾಯದ ಮಟ್ಟ ಮೀರಿ ಜನಜೀವನ ಅಸ್ತವ್ಯಸ್ತಗೊಳ್ಳುವ ಭೀತಿ ಕಂಡುಬಂದಿದೆ.
ಕುಂಬಳೆ ನಗರದಲ್ಲಿ ಬೀಸಿದ ಬಲವಾದ ಗಾಳಿಯಿಂದಾಗಿ ಕಟ್ಟಡವೊಂದರ ಕಬ್ಬಿಣದ ಮೇಲ್ಛಾವಣಿ ಕುಸಿದು ರಸ್ತೆಗೆ ಬಿದ್ದಿದೆ. ಸೋಮವಾರ ಬೆಳಗಿನ ಜಾವ 5:30 ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಬೆಳಗಿನ ಜಾವವಾದ್ದರಿಂದ ರಸ್ತೆಯಲ್ಲಿ ಯಾವುದೇ ಜನ ಅಥವಾ ವಾಹನಗಳು ಇರಲಿಲ್ಲ. ಇದರಿಂದಾಗಿ ದೊಡ್ಡ ಅನಾಹುತ ತಪ್ಪಿದೆ.
ಕುಂಬಳೆ-ಬದಿಯಡ್ಕ ರಸ್ತೆಯಲ್ಲಿರುವ ಮೂರು ಅಂತಸ್ತಿನ ಕಟ್ಟಡದ ಕಬ್ಬಿಣದ ಶೀಟ್(ಕೊಟ್ಟುಡಲ್ ಅಂಗಡಿ ಬಳಿ) ಗಾಳಿಗೆ ಹಾರಿ ರಸ್ತೆಗೆ ಬಿದ್ದಿದೆ. ಉಪ್ಪಳದಿಂದ ಬಂದ ಅಗ್ನಿಶಾಮಕ ದಳದ ತಂಡ ಮತ್ತು ಸ್ಥಳೀಯರು ಛಾವಣಿಯನ್ನು ವಿಲೇವಾರಿಗೊಳಿಸಿದರು. ಕಳೆದ ಎರಡು ದಿನಗಳಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ.
ನಾರಾಯಣಮಂಗಲ ಸಮೀಪ ಕಾನ ಮಠದ ಶ್ರೀಧೂಮಾವತೀ ದ್ಯೆವಸ್ಥಾನ ಬಹುತೇಕ ಜಲಾವೃತವಾಗಿದ್ದು, ಪಕ್ಕದ ತೋಡು ತುಂಬಿ ಹರಿಯುತ್ತಿದೆ. ಪರಿಸರದ ಅಡಕೆ ತೋಟ ಜಲಾವೃತವಾಗಿದೆ.
ಹಲವು ಸ್ಥಳಗಳಲ್ಲಿ ಹಾನಿ ಸಂಭವಿಸಿದ ವರದಿಯಾಗಿದೆ.




