ಉಪ್ಪಳ: ಕುರುಡಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವ ಸೋಮವಾರ ನಡೆಯಿತು. ಶಾಲಾ ವ್ಯವಸ್ಥಾಪಕ, ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕ ವೃಂದ ಮತ್ತು ಅತಿಥಿಗಳು ಶಾಲಾ ಪ್ರವೇಶೋತ್ಸವ ಗೀತೆಯನ್ನು ಹಾಡುತ್ತಾ, ಹೊಸದಾಗಿ ಸೇರ್ಪಡೆಯಾದ ಪುಟಾಣಿಗಳಿಗೆ ಹೂ ನೀಡಿ ಅವರನ್ನು ಆತ್ಮೀಯವಾಗಿ ಶಾಲಾ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು. ಅಧ್ಯಾಪಿಕೆಯರಾದ ಅರ್ಚನಾ, ಹರ್ಷಿತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಕೇಶವ ಬಾಯಿಕಟ್ಟೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದರು. ಮಕ್ಕಳು ಅಕ್ಷರ ದೀಪ ಬೆಳಗಿಸಿದರು. ಹೊಸದಾಗಿ ಶಾಲೆಗೆ ಪ್ರವೇಶ ಪಡೆದ ಮಕ್ಕಳಿಗೆ ಪೈವಳಿಕೆ ಸೇ.ಸ.ಬ್ಯಾಂಕ್ ವತಿಯಿಂದ ಉಚಿತವಾಗಿ ನೀಡಲಾದ ಬ್ಯಾಗ್ ಮತ್ತು ಪುಸ್ತಕವನ್ನು ಕಾರ್ಯದರ್ಶಿ ಮಕ್ಕಳಿಗೆ ವಿತರಿಸಿದರು.
ಶಾಲಾ ವ್ಯವಸ್ಥಾಪಕ ಸಮಿತಿ ಸದಸ್ಯರೂ, ನಿವೃತ್ತ ಮುಖ್ಯೋಪಾಧ್ಯಾಯ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಘವ ಕುರಿಯ, ಶಾಲೆಯ ಹಳೆ ವಿದ್ಯಾರ್ಥಿ, ರಕ್ಷಕರೂ ಆದ ಬಷೀರ್ ಶುಭಹಾರೈಸಿದರು. ಎಂಪಿಟಿಎ ಅಧ್ಯಕ್ಷೆ ಹಸೀನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಪದ್ಮನಾಭ ಬರ್ಲಾಯ ಸ್ವಾಗತಿಸಿ, ಹಿರಿಯ ಅಧ್ಯಾಪಕ ಗಿರೀಶ್ ವಂದಿಸಿದರು. ಹಿಂದಿ ಅಧ್ಯಾಪಕ ಸತೀಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

.jpg)
.jpg)

