ಮಂಜೇಶ್ವರ: ಕೇರಳ ರಾಜ್ಯ ಗ್ರಂಥಾಲಯ ಪಿತಾಮಹ ಪಿ.ಎನ್. ಪಣಿಕ್ಕರ್ ಮತ್ತು ಐ.ವಿ.ದಾಸ್ ಅವರ ಸ್ಮರಣೆ ದಿನವಾದ ಜೂ. 19 ರಿಂದ ಜುಲೈ 7 ರ ತನಕ ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ನೇತೃತ್ವದಲ್ಲಿ ಗ್ರಂಥಾಲಯ ವಾಚನ ಪಕ್ಷಾಚರಣೆ ಆಚರಿಸಲು ನಿರ್ಧರಿಸಿದೆ. ಇದರ ಅಂಗವಾಗಿ ಬಂಗ್ರಮಂಜೇಶ್ವರ ಸರ್ಕಾರಿ ಹೈಸ್ಕೂಲಿನಲ್ಲಿ ಗುರುವಾರ ಚಾಲನೆ ನೀಡಲಾಯಿತು. ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಟೀಚರ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಮಂಜೆಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಕುಸಿಯುತ್ತಿರುವುದು ಹೌದಾದರೂ ಡಿಜಿಟಲ್ ರೂಪದಲ್ಲಿ ಒಂದಷ್ಟು ಓದುವಿಕೆ, ಅನಿವಾರ್ಯವಾದರೂ ನಡೆಯುತ್ತಿದೆ. ಆದರೆ ಪುಸ್ತಕ ಓದುವಿಕೆಯಿಂದ ಲಭಿಸುವ ಪರಿಪೂರ್ಣ ಅರಿವು ಡಿಜಿಟಲ್ ರೂಪದ ಓದುವಿಕೆಯಲ್ಲಿ ಖಂಡಿತಾ ಲಭಿಸದು. ಈ ನಿಟ್ಟಿನಲ್ಲಿ ಆಕರ್ಷಣೀಯ ಪುಸ್ತಕ ಓದುವಿಕೆಗೆ ತಂತ್ರಜ್ಞಾನ ಬಳಸುವತ್ತ ಕ್ರಮಗಳು ರೂಪುಗೊಳ್ಳಬೇಕು ಎಂದವರು ತಿಳಿಸಿದರು.
ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ದಿಲಿಪ್ ಕುಮಾರ್ ಅವರು ಪಿ.ಎನ್. ಪಣಿಕ್ಕರ್ ಮತ್ತು ಇತ್ತೀಚೆಗೆ ನಿಧನರಾದ ಜಿಲ್ಲಾ ವಿ ದ್ಯಾಧಿಕಾರಿ ದಿನೇಶ್ ವಿ.ಯವರ ಸಂಸ್ಮರಣೆಗೈದು ವಿಷಯ ಮಂಡಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ರಹಿಮಾನ್, ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್ ಸದಸ್ಯ ಪಿ.ಕೆ ಅಹ್ಮದ್ ಹುಸೈನ್, ಮಂಜೇಶ್ವರ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ ಬಡಾಜೆ, ಶಾಲಾ ಮುಖ್ಯಾಪಾದ್ಯಾಯಿನಿ ಗಾಯತ್ರಿ, ಹೈಯರ್ ಸೆಕೆಂಡರಿ ಪ್ರಾಂಶುಪಾಲೆ ಶಬೀನ, ಪಿ.ಟಿ.ಎ. ಅಧ್ಯಕ್ಷ ಅಶ್ರಫ್ ಬಿ.ಎಂ., ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗ್ರಂಥಾಲಯದ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿಗಾರ್, ಹೊಸಂಗಡಿಯ ಬಿ.ಎಂ ರಾಮಯ್ಯ ಶೆಟ್ಟಿ ಗ್ರಂಥಾಲಯದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಮೊದಲಾದವರು ಸಭೆಯಲ್ಲಿ ಮಾತನಾಡಿದರು. ತಾಲೂಕು ಗ್ರಂಥಾಲಯ ಕೌನ್ಸಿಲ್ ಕಾರ್ಯದರ್ಶಿ ಡಿ.ಕಮಲಾಕ್ಷ ಸ್ವಾಗತಿಸಿ, ಕಾರ್ಯಾಕಾರಿ ಸಮಿತಿ ಸದಸ್ಯ ಸುಧಾಕರ ಮಾಸ್ತರ್ ವಂದಿಸಿದರು.




.jpg)
.jpg)
