HEALTH TIPS

ಸಿಂಗಪುರದಲ್ಲಿ ಸಿಡಿಎಸ್ ಹೇಳಿಕೆ: ವಿಶೇಷ ಅಧಿವೇಶನ ಕರೆಯಲು ಕಾಂಗ್ರೆಸ್ ಒತ್ತಾಯ

ನವದೆಹಲಿ: ಆರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ದೇಶದ ಯುದ್ಧ ವಿಮಾನಗಳ ನಷ್ಟದ ಕುರಿತು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಅನಿಲ್‌ ಚೌಹಾಣ್ ಹೇಳಿಕೆಯ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ರಕ್ಷಣಾ ಮತ್ತು ವಿದೇಶಾಂಗ ನೀತಿಗಳ ಕಾರ್ಯತಂತ್ರದ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಆಗ್ರಹಿಸಿದೆ.

'ಸಿಡಿಎಸ್‌ ಅನಿಲ್‌ ಚೌಹಾಣ್‌ ಅವರು ಸಿಂಗಪುರದಲ್ಲಿ ಕೆಲವು ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ. ಮೊದಲೇ ನಡೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಅಥವಾ ರಕ್ಷಣಾ ಸಚಿವರು ಈ ಸಂಗತಿಗಳನ್ನು ವಿರೋಧ ಪಕ್ಷಗಳ ನಾಯಕರಿಗೆ ತಿಳಿಸಿದ್ದರೆ ಚೆನ್ನಾಗಿತ್ತು' ಎಂದು ಎಐಸಿಸಿಯ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಹೇಳಿದರು.

'ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ನಂತರದಲ್ಲಿ ವಿದೇಶಾಂಗ ನೀತಿಯ ಕಾರ್ಯತಂತ್ರ ಮತ್ತು ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕೆಂಬ ಬೇಡಿಕೆಗೆ ಅನಿಲ್‌ ಚೌಹಾಣ್‌ ಅವರ ಹೇಳಿಕೆಗಳು ಬಲ ತುಂಬಿವೆ' ಎಂದು ಅವರು ತಿಳಿಸಿದರು.

'ಪಾಕಿಸ್ತಾನದ ಜತೆಗೆ ಈಚೆಗೆ ನಡೆದ ಮಿಲಿಟರಿ ಸಂಘರ್ಷದ ಆರಂಭದಲ್ಲಿ ಭಾರತ ಕೆಲವು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ. ಬಳಿಕ ನಾವು ತಂತ್ರಗಾರಿಕೆಯನ್ನು ಬದಲಿಸಿಕೊಂಡೆವು' ಎಂದು ಚೌಹಾಣ್‌ ಸಿಂಗಪುರದಲ್ಲಿ ಶನಿವಾರ ಹೇಳಿದ್ದರು.

'ಸರ್ವಪಕ್ಷಗಳ ಸಭೆ ಮತ್ತು ವಿಶೇಷ ಅಧಿವೇಶನವನ್ನು ಕರೆಯುವಂತೆ ನಾವು ಆಗ್ರಹಿಸುತ್ತಲೇ ಇದ್ದೇವೆ. ಕಾರ್ಗಿಲ್‌ ಯುದ್ಧದ ಬಳಿಕ ನಡೆಸಿದ ಮಾದರಿಯಲ್ಲೇ ವಿಶೇಷ ಅಧಿವೇಶನ ಕರೆದು ಈ ಬಗ್ಗೆ ಚರ್ಚಿಸಬೇಕು' ಎಂದು ಜೈರಾಂ ರಮೇಶ್ ಆಗ್ರಹಿಸಿದರು.

'ಕಾರ್ಗಿಲ್‌ ಯುದ್ಧ ಅಂತ್ಯವಾದ ಬಳಿಕ ಈಗಿನ ವಿದೇಶಾಂಗ ಸಚಿವ ಎಸ್. ಜೈಶಂಕರ್‌ ಅವರ ತಂದೆಯ ಅಧ್ಯಕ್ಷತೆಯಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪರಿಶೀಲನಾ ಸಮಿತಿಯೊಂದನ್ನು ರಚಿಸಿದ್ದರು. ಸಮಿತಿಯ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿ ಚರ್ಚಿಸಲಾಗಿತ್ತು. ಈಗ ಅಂತಹ ಸಮಿತಿ ರಚಿಸಲಾಗುವುದೇ' ಎಂದು ಪ್ರಶ್ನಿಸಿದರು.

'ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ವಿಷಯಗಳನ್ನು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಚರ್ಚಿಸಬೇಕು' ಎಂದು ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಆಗ್ರಹಿಸಿದರು.

'ಅಮೆರಿಕ ಯುದ್ಧ ವಿರಾಮ ಪ್ರಕಟಿಸುತ್ತಿದ್ದಂತೆಯೇ ನಾಯಕರು ಆಪರೇಷನ್‌ ಸಿಂಧೂರ ಕುರಿತು ಚರ್ಚಿಸಲು ವಿದೇಶಗಳಿಗೆ ತೆರಳಿದ್ದಾರೆ. ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ? ಉತ್ತರ ಸರ್ಕಾರದಿಂದ ಬರಬೇಕು, ಸೇನಾಪಡೆಗಳಿಂದ ಅಲ್ಲ' ಎಂದರು.

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಪ್ರಮೋದ್‌ ತಿವಾರಿ ಮಾತನಾಡಿ, 'ಇತ್ತೀಚಿನ ಮಿಲಿಟರಿ ಸಂಘರ್ಷದ ಕುರಿತು ಜನರಿಗೆ ಒಗ್ಗಟ್ಟಿನ ಉತ್ತರ ಬೇಕಿದೆ. ನಾಯಕರು ಭಿನ್ನವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿಡಿಎಸ್‌, ನಮ್ಮ ಯುದ್ಧ ವಿಮಾನ ನಷ್ಟವಾಗಿರುವುದನ್ನು ಒಪ್ಪಿಕೊಂಡು ಬೇರೊಂದು ರೀತಿಯಲ್ಲಿ ಮಾತನಾಡಿದ್ದಾರೆ. ಸರ್ಕಾರ ಇದನ್ನು ಸ್ಪಷ್ಟಪಡಿಸಬೇಕು' ಎಂದು ಆಗ್ರಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries