HEALTH TIPS

'ಇಂಡಿಯಾ'ದಲ್ಲಿನ ಒಡಕು ಬಹಿರಂಗ: ಉಪಚುನಾವಣೆಯಲ್ಲಿ ಪರಸ್ಪರ ಸೆಣಸು

ನವದೆಹಲಿ: ವಿವಿಧ ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ಜೂನ್‌ 19ರಂದು ನಡೆಯಲಿರುವ ಉಪಚುನಾವಣೆಯು ವಿಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದಲ್ಲಿನ ಒಡಕನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.

ಚುನಾವಣೆಗೆ ಸ್ಪರ್ಧಿಸುವುದಕ್ಕೆ ಸಂಬಂಧಿಸಿ ಮೈತ್ರಿಕೂಟದ ಪ್ರಮುಖ ಪಕ್ಷಗಳು ಯಾವುದೇ ಸಾಮಾನ್ಯ ಅಂಶಗಳನ್ನು ಹೊಂದಿಲ್ಲ.

ಮತ್ತೊಂದೆಡೆ ಅಂಗಪಕ್ಷಗಳು ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬದಲು, ಪರಸ್ಪರರ ವಿರುದ್ಧವೇ ಸೆಣಸಲು ಮುಂದಾಗಿರುವುದೇ ಇದಕ್ಕೆ ಕಾರಣ.

ಗುಜರಾತ್‌ನ ವಿಸಾವಾಡಾ ಮತ್ತು ಕಡಿ, ಪಶ್ಚಿಮ ಬಂಗಾಳದ ಕಾಳಿಗಂಜ್, ಪಂಜಾಬ್‌ನ ಲುಧಿಯಾನ್-ಪಶ್ಚಿಮ ಹಾಗೂ ಕೇರಳದ ನಿಲಂಬೂರ್‌ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆಯಲಿವೆ. ಕಾಂಗ್ರೆಸ್‌ ಪಕ್ಷ ಈ ಎಲ್ಲ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ.

'ಇಂಡಿಯಾ'ದ ಅಂಗಪಕ್ಷಗಳ ಪೈಕಿ, ಆಮ್‌ ಆದ್ಮಿ ಪಕ್ಷವು (ಎಎಪಿ) ಗುಜರಾತ್‌ ಹಾಗೂ ಪಂಜಾಬ್‌ನಲ್ಲಿ ಸ್ಪರ್ಧಿಸುತ್ತಿದ್ದರೆ, ಪಶ್ಚಿಮ ಬಂಗಾಳದ ಕಾಳಿಗಂಜ್‌ನಲ್ಲಿ ಟಿಎಂಸಿ ಹಾಗೂ ನಿಲಂಬೂರ್‌ ಕ್ಷೇತ್ರದಿಂದ ಸಿಪಿಎಂ ಸ್ಪರ್ಧಿಸುತ್ತಿವೆ.

ಪಶ್ಚಿಮ ಬಂಗಾಳದಲ್ಲಿ, ಕಳೆದ ಒಂದು ದಶಕದಿಂದ ಸಿಪಿಎಂ ಪಕ್ಷದ ವಿರುದ್ಧ ಸ್ಪರ್ಧೆ ಮಾಡುತ್ತಿದ್ದ ಕಾಂಗ್ರೆಸ್‌, ಈ ಉಪಚುನಾವಣೆಯಲ್ಲಿ ಟಿಎಂಸಿ ವಿರುದ್ಧ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ. ಈ ಉಪಚುನಾವಣೆಯಲ್ಲಿ, ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಹಾಗೂ ಟಿಎಂಸಿ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ, ಅವು ಫಲ ನೀಡಿಲ್ಲ.

ಕಳೆದ ನವೆಂಬರ್‌ನಲ್ಲಿ ಪಶ್ಚಿಮ ಬಂಗಾಳದ 6 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಸಿಪಿಎಂ ಪಕ್ಷಗಳೆರಡು ಪರಸ್ಪರರ ವಿರುದ್ಧ ಸೆಣಸಿದ್ದವು. ಆದರೆ, ಟಿಎಂಸಿ ವಿರುದ್ಧ ಜಯ ಸಾಧಿಸಲು ವಿಫಲವಾಗಿದ್ದವು.

ಗಮನಾರ್ಹ ಬೆಳವಣಿಗೆಯಲ್ಲಿ, ಈ ಬಾರಿ ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಸೇರಲು ಟಿಎಂಸಿ ಪ್ರಯತ್ನಿಸುತ್ತಿದೆ. ಎಡಪಕ್ಷಗಳ ಬೆಂಬಲದಿಂದ ಶಾಸಕರಾಗಿದ್ದ ಪಕ್ಷೇತರ ಶಾಸಕ ಪಿ.ವಿ.ಅನ್ವರ್, ಈಗ ಟಿಎಂಸಿ ಸೇರಿರುವುದು ಇದಕ್ಕೆ ಕಾರಣ.

ಆದರೆ, ಕೇರಳದಲ್ಲಿ ತನ್ನ ನೇತೃತ್ವದ ಮೈತ್ರಿಕೂಟವನ್ನು (ಯುಡಿಎಫ್‌) ಟಿಎಂಸಿ ಸೇರುವುದಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಇನ್ನೂ ಹಸಿರು ನಿಶಾನೆ ತೋರಿಲ್ಲ. ಟಿಎಂಸಿ ಜೊತೆಗಿನ ಸಂಘರ್ಷದಿಂದ ಕೂಡಿದ ಸಂಬಂಧವೇ ಕಾಂಗ್ರೆಸ್‌ ಹೈಕಮಾಂಡ್‌ನ ಇಂತಹ ನಿಲುವಿಗೆ ಕಾರಣ ಎನ್ನಲಾಗುತ್ತಿದೆ.

ಕಾಂಗ್ರೆಸ್‌ ಹಾಗೂ ಎಎಪಿ ನಡುವಿನ ಸಂಬಂಧದಲ್ಲಿಯೂ ಬಿರುಕು ಕಾಣಿಸಿಕೊಂಡಿದೆ. ಗುಜರಾತ್‌ನಲ್ಲಿ ಈ ಎರಡು ಪಕ್ಷಗಳು ಪ್ರತ್ಯೆಕವಾಗಿಯೇ ಸ್ಪರ್ಧಿಸುತ್ತಿವೆ.

ವಿಸಾವಾಡಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೋಪಾಲ್‌ ಇಟಾಲಿಯಾ ಪರ ಎಎಪಿ, ಶನಿವಾರ ರೋಡ್‌ಶೋ ನಡೆಸಿದೆ. ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಕ್ಷದ ಶಾಸಕ ಬಿಜೆಪಿ ಸೇರ್ಪಡೆಯಾಗಿರುವ ಕಾರಣ, ಇಲ್ಲಿ ಉಪಚುನಾವಣೆ ನಡೆಯುತ್ತಿದೆ.

ರೋಡ್‌ಶೋದಲ್ಲಿ ಮಾತನಾಡಿರುವ ಎಎಪಿ ವರಿಷ್ಠ ಅರವಿಂದ ಕೇಜ್ರಿವಾಲ್‌,'2022ರ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ನಾವು ಸ್ಪರ್ಧೆ ಮಾಡಿರಲಿಲ್ಲ. ವಿಸಾವಾಡಾದಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಕಾಂಗ್ರೆಸ್‌ಗೆ ಹೇಳಿದ್ದೆವು. ಅದಕ್ಕೆ ಅದು ಒಪ್ಪಲಿಲ್ಲ. ಕಾಂಗ್ರೆಸ್‌ ದ್ರೋಹ ಬಗೆದಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

'ಭಿನ್ನಮತ: ಮಹತ್ವ ಬೇಡ'

'ಇಂಡಿಯಾ' ಮೈತ್ರಿಕೂಟ ಅಂಗಪಕ್ಷಗಳು ಪರಸ್ಪರರ ವಿರುದ್ಧ ಸ್ಪರ್ಧಿಸುತ್ತಿರುವ ಈ ಬೆಳವಣಿಗೆ ಬಗ್ಗೆ ಹೆಚ್ಚು ಮಹತ್ವ ನೀಡುವ ಅಗತ್ಯ ಇಲ್ಲ. ಕಳೆದ ವರ್ಷದ ಉಪಚುನಾವಣೆಗಳ ವೇಳೆಯೂ ಹೀಗೆಯೇ ಆಗಿತ್ತು. ಭವಿಷ್ಯದಲ್ಲಿಯೂ ಇದು ಮುಂದುವರಿಯುತ್ತದೆ' ಎಂದು ವಿರೋಧ ಪಕ್ಷಗಳ ಪಾಳಯದ ಮೂಲಗಳು ಹೇಳುತ್ತವೆ. 'ವಿರೋಧ ಪಕ್ಷಗಳು ಸಂಸತ್‌ನಲ್ಲಿ ಯಾವ ರೀತಿ ಪರಸ್ಪರ ಸಹಕಾರ ನೀಡುತ್ತವೆ ಎಂಬುದಷ್ಟೆ ಮುಖ್ಯ. ವಿಪಕ್ಷಗಳು ಅಲ್ಲಿ ಒಗ್ಗಟ್ಟಿನಿಂದಿವೆ' ಎಂದು ವಿರೋಧ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries