ಕಾಸರಗೋಡು: ಸರ್ವಿಸ್ ರಸ್ತೆಯಲ್ಲಿ ಜನರಿಗೆ ತೊಂದರೆ ಉಂಟುಮಾಡುವ ಹಾಗೂ ಪಾದಚಾರಿಗಳಿಗೆ ಸಂಚರಿಸಲಿರುವ ಹಾದಿ ಮುಚ್ಚಿರುವ ಕ್ರಮ ಖಂಡಿಸಿ ಕರಂದಕ್ಕಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಳೀಯರು ಮತ್ತು ವ್ಯಾಪಾರಿಗಳಿಂದ ಪ್ರತಿಭಟನೆ ನಡೆಯಿತು.
ಮಧೂರು ರಸ್ತೆ ಮತ್ತು ಹೊಸ ಬಸ್ ನಿಲ್ದಾಣದ ನಡುವೆ ಬರುವ ಅರಮನ ಆಸ್ಪತ್ರೆ ಮತ್ತು ಕಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ತೆಂಕುಭಾಗಕ್ಕೆ ಸಾಗುವ ಅಂಡರ್‍ಪಾಸ್ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ ದಕ್ಷಿಣದಿಂದ ಪ್ರಯಾಣಿಸಲು ಅಂಡರ್‍ಪಾಸ್ ರಸ್ತೆಯನ್ನು ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಮುಚ್ಚಿರುವ ಕೃತ್ಯವನ್ನು ಖಂಡಿಸಲಾಯಿತು. ಹೆದ್ದಾರಿ ನಿರ್ಮಾಣ ವಿಭಾಗ ಅಧಿಕಾರಿಗಳ ಇಂತಹ ಧೋರಣೆಗೆ ಸ್ಥಳೀಯರು ಮತ್ತು ಆಸ್ಪತ್ರೆ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಾದಿ ಮುಚ್ಚುವುದರಿಂದ ಜಿಲ್ಲಾ ವ್ಯಾಪಾರ ಭವನ, ಬ್ಲಾಕ್ ಪಂಚಾಯಿತಿ ಕಚೇರಿ, ಸಿನಿಮಾ ಮಂದಿರ, ಕೃಷಿ ಭವನ ಮುಂತಾದ ಸ್ಥಳಗಳಿಗೆ ಹೋಗುವವರು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ನಗರ ಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಮತ್ತು ವಾರ್ಡ್ ಕೌನ್ಸಿಲರ್ ಪವಿತ್ರಾ ಅವರ ನೇತೃತ್ವದಲ್ಲಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಾಧಿಕಾರದ ಅದಿಕಾರಿಗಳ ಜತೆ ನಡೆಸಿದ ಚರ್ಚೆಯಲ್ಲಿ ಈ ತಿಂಗಳ 21 ರವರೆಗೆ ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸುವ ಬಗ್ಗೆ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ತಾತ್ಕಾಲಿಕವಾಗಿ ಕೊನೆಗೊಳಿಸಲಾಯಿತು.


