ಕಾಸರಗೋಡು: ವಯನಾಡು ಮೇವಾಡಿ ಕೊಕ್ಕತ್ತೋಡ್ ಎಂಬಲ್ಲಿ ಜೀಪು, ಬೈಕ್ ಡಿಕ್ಕಿಯಾಗಿ ಬೈಕ್ ಹಿಂಬದಿ ಸವಾರೆ ನೆಲ್ಲಿಮುಂಡ ಕಳಪ್ಪುರಂ ನಿವಾಸಿ ಇಬ್ರಾಹಿಂ ಎಂಬವರ ಪತ್ನಿ ಬೀಯಮ್ಮ(56)ಮೃತಪಟ್ಟ ಘಟನೆಗೆ ಸಂಬಂಧಿಸಿ ಕಾಸರಗೋಡು ಮೇಲ್ಪರಂಬ ನಿವಾಸಿಗಳಾದ ನಾಲ್ವರನ್ನು ವಯನಾಡು ಮೇವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚೆಮ್ನಾಡ್ ಪೆರುಂಬಳ ನಿವಾಸಿ ಅಖಿಲ್, ಅರಮಂಗಾನದ ಪ್ರಶಾಂತ್, ಪೆರುಂಬಳದ ನಿದಿ ಹಾಗೂ ಪೆರುಂಬಳದ ನಿತಿನ್‍ನಾರಾಯಣ್ ಬಂಧಿತರು. ತಮ್ಮ ಬೊಲೆರೋ ಜೀಪಿನಲ್ಲಿ ಜೂ. 8ರಂದು ತಂಡ ಕೊಟ್ಟಿಯೂರು ಕ್ಷೇತ್ರ ಪ್ರವಾಸಗೈದು ವಾಪಸಾಗುವ ಮಧ್ಯೆ ಬೀಯಮ್ಮ ಅವರ ಮೊಮ್ಮಗ ಅಫ್ಸನ್ ಚಲಾಯಿಸುತ್ತಿದ್ದ ಬೈಕ್‍ಗೆ ಡಿಕ್ಕಿಯಾಗಿದ್ದು, ಬೀಯಮ್ಮ ಮೃತಪಟ್ಟಿದ್ದರು. ಇದಕ್ಕೂ ಮೊದಲು ಬೈಕ್‍ಸವಾರನೊಂದಿಗೆ ಜೀಪಿನಲ್ಲಿದ್ದವರು ವಾಗ್ವಾದ ನಡೆಸಿದ್ದು, ನಂತರ ಬೈಕನ್ನು ಹಿಂದಿಕ್ಕಿ ಜೀಪು ಸಾಗುವ ಮಧ್ಯೆ ಅಪಘಾತವುಂಟಾಗಿತ್ತು. ಬೈಕಿಗೆ ಉದ್ದೇಶಪೂರ್ವಕವಾಗಿ ಜೀಪು ಡಿಕ್ಕಿ ಮಾಡಲಾಗಿದೆ ಎಂದು ಆರೋಪವುಂಟಾಗಿದ್ದ ಹಿನ್ನೆಲೆಯಲ್ಲಿ ಜೀಪು ವಶಕ್ಕೆ ತೆಗೆದುಕೊಮಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

