ಕಾಸರಗೋಡು: ನಗರದಲ್ಲಿ ಕಾರ್ಯಾಚರಿಸುತ್ತಿರುವ ಜನರಲ್ ಆಸ್ಪತ್ರೆ ಇನ್ನು ಮುಂದೆ ವೈದ್ಯಕೀಯ ಕಾಲೇಜು ಆಗಿ ಮೇಲ್ದರ್ಜೆಗೇರಲಿದ್ದು, ಇದರ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿದೆ. ಕಾಸರಗೋಡು ಜನರಲ್ ಆಸ್ಪತ್ರೆ ಇನ್ನು ಮುಂದೆ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯಾಗಿ ಗುರುತಿಸಿಕೊಳ್ಳಲಿದೆ. ಉಕ್ಕಿನಡ್ಕದಲ್ಲಿ ನಿರ್ಮಾಣಹಂತದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜಿಗೆ ಪೂರಕವಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಜನರಲ್ ಆಸ್ಪತ್ರೆಯಲ್ಲಿ ಕಾರ್ಯಾಚರಿಸಲಿದೆ.
ಈ ಬಗ್ಗೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈಗಾಗಲೇ ಅಧಿಸೂಚನೆ ಹೊರಡಿಸಿದ್ದಾರೆ. ಜನರಲ್ ಆಸ್ಪತ್ರೆಯಲ್ಲಿ ಪ್ರಸಕ್ತ ಇರುವ ಸೌಲಭ್ಯಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜಿನ ಭಾಗವಾಗಿ ಮುನ್ನಡೆಸಿಕೊಂಡು ಹೋಗಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಸ್ಪತ್ರೆಯ ಆರೋಗ್ಯಸೇವಾ ನಿರ್ದೇಶಕ(ಹೆಲ್ತ್ ಸರ್ವೀಸ್ ಡೈರೆಕ್ಟರ್)ರಿಂದ ಆರಂಭಗೊಂಡು ಎಲ್ಲಾ ವೈದ್ಯರೂ ಇನ್ನು ಈ ಆಸ್ಪತ್ರೆಯಲ್ಲಿ ಡೆಪ್ಯುಟೇಶನ್ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಈಗಾಗಲೇ ಉಕ್ಕಿನಡ್ಕದಲ್ಲಿ ನಿರ್ಮಾಣಹಂತದಲ್ಲಿರುವ 220ಹಾಸಿಗೆಗಳ ಸುಸಜ್ಜಿತ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ತಿಗೊಳ್ಳಲು ಇನ್ನೂ ಕಾಲಾವಕಾಶ ತಗಲುವ ಹಿನ್ನೆಲೆಯಲ್ಲಿ ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸಲಾಗುತ್ತಿದೆ. ಹೊಸದಾಗಿ ಆರಂಭಗೊಳ್ಳುವ ಆಸ್ಪತ್ರೆಗೆ ಮೂರು ವರ್ಷಗಳ ಸೇವಾ ಅನುಭವ ಜತೆಗೆ ಪ್ರತಿ ದಿನಕನಿಷ್ಟ 220ಮಂದಿ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡುವ ವ್ಯವಸ್ಥೆಯಿದ್ದಲ್ಲಿಮಾತ್ರ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾನದಂಡದನ್ವಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಿಸಲು ಗ್ರೀನ್ ಸಿಗ್ನಲ್ ಸಿಗಲಿದೆ.
ಉಕ್ಕಿನಡ್ಕದ ವೈದ್ಯಕೀಯ ಕಾಲೆಜು ಆಸ್ಪತ್ರೆ ಕಾಮಗಾರಿ ನಿಧಾನಗತಿಯಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಮಾನದಂಡ ಪ್ರಕಾರ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನಿಡುವ ರೀತಿಯಲ್ಲಿ ಆಸ್ಪತ್ರೆ ಕಾಮಗಾರಿ ಪೂರ್ತಿಗೊಳ್ಳಬೇಕಾದರೆ ಇನ್ನಷ್ಟು ಕಾಲಾವಕಾಶ ಬೇಕಾಗಿಬರಲಿದೆ. ಕಟ್ಟಡ ಪೂರ್ತಿಗೊಂಡರೂ, ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಿಸಲು ಮತ್ತೆ ಮೂರು ವರ್ಷ ಕಾಲ ಕಾಯಬೇಕು. ಈ ವಿಳಂಬ ತಪ್ಪಿಸಲು ಸರ್ಕಾರ ಕಾಸರಗೊಡು ಜನರಲ್ ಆಸ್ಪತ್ರೆಯನ್ನು ಉಕ್ಕಿನಡ್ಕದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಭಾಗವಾಗಿ ಮುಂದುವರಿಸುವುದರ ಜತೆಗೆ ಉಕ್ಕಿನಡ್ಕದ ಕಟ್ಟಡ ಕಾಮಗಾರಿ ಶೀಘ್ರ ಪೂರ್ತಿಗೊಳಿಸಿ ಅಲ್ಲೇ ವೈದ್ಯಕೀಯ ಕಾಲೇಜು ಆಸ್ಪತ್ರೆ ಮುಂದುವರಿಸಲು ತೀರ್ಮಾನಿಸಿದೆ.
ಎಂಡೋ ಸಂತ್ರಸ್ತರಲ್ಲಿ ಆಶಾಕಿರಣ:
ಬದಿಯಡ್ಕ ಪಂಚಾಯಿತಿಯ ಉಕ್ಕಿನಡ್ಕದಲ್ಲಿ 2013ರಲ್ಲಿ ಆರಂಭಿಸಿದ್ದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಶಿಲಾನ್ಯಾಸ ನಡೆಸಿದಂದಿನಿಂದ ಮೂರು ವರ್ಷ ಕಾಲಾವಧಿಯಲ್ಲಿ ಪೂರ್ತಿಗೊಳಿಸಲು ಯೋಜನೆಯಿರಿಸಿಕೊಳ್ಳಲಾಗಿದ್ದರೂ, 11ವರ್ಷ ದಾಟಿದರೂ ಕಾಮಗಾರಿ ಪೂರ್ತಿಗೊಳಿಸಲಾಗದಿರುವ ಬಗ್ಗೆ ಸರ್ಕಾರಕ್ಕೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಮಧ್ಯೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ಅಸ್ಪತ್ರೆ ಅರಂಭಿಸಲು ಸರ್ಕಾರ ಮುಂದಾಗಿರುವುದು ಜನರಲ್ಲಿ ಆಶಾಭಾವನೆ ಮೂಡಿಸಿದೆ.
ಹೊಸದಾಗಿ ಆರಂಭಗೊಳ್ಳಲಿರುವ ವೈದ್ಯಕೀಯ ಕಾಲೇಜಿಗೆ ವೈದ್ಯರ ನೇಮಕಾತಿ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ಮೀನಾಮೇಷ ಎಣಿಸಿದರೆ, ಎರಡೂ ಯೋಜನೆಗಳು ವ್ಯರ್ಥವಾಗುವ ಸಾಧ್ಯತೆ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರನ್ನು ಹೊಂದಿರುವ ಎಣ್ಮಕಜೆ, ಬೆಳ್ಳೂರು, ಕುಂಬ್ಡಾಜೆ ಪಂಚಾಯಿತಿಗೆ ಅತ್ಯಂತ ಸನಿಹದಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ತಲೆಯೆತ್ತುತ್ತಿರುವುದು ಸಂತ್ರಸ್ತರಲ್ಲೂ ಭರವಸೆ ಮೂಡಿಸಿದ್ದು, ಸರ್ಕಾರ ಮತ್ತಷ್ಟು ವಿಳಂಬವಾಗದಂತೆ ನೋಡಿಕೊಳ್ಳಬೇಕಾಗಿದೆ.
ಅಭಿಮತ:
ಕಾಸರಗೊಡು ಜನರಲ್ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಶಿಫಾರಸು ನಡೆಸಿದ್ದು, ನ್ಯಾಶನಲ್ ಮೆಡಿಕಲ್ ಕೌನ್ಸಿಲ್‍ನ ಅನುಮೋದನೆಗಾಗಿ ಕಾಯಲಾಗುತ್ತಿದೆ. ಅಂಗೀಕಾರ ಲಭಿಸಿದ ತಕ್ಷಣ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮುಂದಿನ ಕಾರ್ಯಚಟುವಟಿಕೆ ಆರಂಭಗೊಳ್ಳಲಿದೆ. ಮುಂದೆ ಉಕ್ಕಿನಡ್ಕ ವೈದ್ಯಕೀಯ ಕಾಲೇಜಿನ ಭಾಗವಾಗಿ ಜನರಲ್ ಆಸ್ಪತ್ರೆ ಕಾರ್ಯಾಚರಿಸಲಿದೆ.
ಡಾ. ಶ್ರೀಕುಮಾರ್, ಸೂಪರಿಂಟೆಂಡೆಂಟ್
ಸರ್ಕಾರಿ ಜನರಲ್ ಆಸ್ಪತ್ರೆ, ಕಾಸರಗೋಡು





