ಮುಳ್ಳೇರಿಯ: ಆಧುನಿಕ ತಂತ್ರಜ್ಞಾನ ಆಧಾರಿತ ಕೃಷಿ ಅಗತ್ಯ ಎಂದು ಪದೇಪದೇ ಹೇಳಲಾಗುತ್ತಿದೆ. ಬದಲಾಗಿರುವ ಹವಾಮಾನ, ವಿಸ್ತರಿಸಿದ ಮಾರುಕಟ್ಟೆ, ಕ್ರಯ-ವಿಕ್ರಯಗಳ ಅತಂತ್ರತೆ ಸಹಿತ ವಿವಿಧ ಸವಾಲುಗಳು ಆಧುನಿಕ ಕೃಷಿಕರದ್ದು. ಈ ನಿಟ್ಟಿನಲ್ಲಿ ತಂತ್ರಜ್ಞಾನ ಅಗತ್ಯ ಎನ್ನಲಾಗುತ್ತಿದ್ದರೂ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಅಂತಹ ನವೀನ ಕೃಷಿ ವ್ಯವಸ್ಥೆಗಳು ಬಳಕೆಯಲ್ಲಿಲ್ಲದಿರುವುದು ದುರ್ದೈವ.
ಇಲ್ಲೊಬ್ಬರು ಕಾರ್ಮಿಕರು ಪ್ರತಿನಿತ್ಯ ಹವಾಮಾನ ಗಮನಿಸಿ ಕೊಯ್ಲು ಹಾಗೂ ಔಷಧಿ ಸಿಂಪರಣೆಗೆ ತೊಡಗಿ ಕಾರ್ಯನಿರ್ವಹಿಸುತ್ತಿರುವುದು ಗಮನ ಸೆಳೆದಿದೆ.ಜಿಲ್ಲೆಯ ಗಡಿಗ್ರಾಮ ಬೆಳ್ಳೂರು ಗ್ರಾ.ಪಂ.ನ ನೆಟ್ಟಣಿಗೆ ನಿವಾಸಿಯಾಗಿರುವ ರಾಮಕೃಷ್ಣ ಇಳಂತೋಡಿ ಎಂಬವರು.
ನೆಟ್ಟಣಿಗೆ, ಬೆಳ್ಳೂರು, ಕುಂಬ್ಡಾಜೆ, ನೀರ್ಚಾಲು, ಕುಂಬಳೆ ಮೊದಲಾದೆಡೆ ಬಹುಬೇಡಿಕೆಯ ಕೊಯ್ಲು ಕಾರ್ಮಿಕರಾದ ರಾಮಕೃಷ್ಣ ಇಳಂತೋಡಿಯವರು ವೆದರ್ ಆಫ್ ಮೂಲಕ ದಿನನಿತ್ಯದ ಹವಾಮಾನ ತಿಳಿದು ಔಷಧಿ ಸಿಂಪರಣೆ ಮತ್ತು ಕೊಯ್ಲಿಗೆ ತೆರಳುವ ಕ್ರಮವನ್ನು ಕಳೆದ ಮೂರು ವರ್ಷಗಳಿಂದ ಪಾಲಿಸುತ್ತಿದ್ದಾರೆ. ಅತಿಯಾದ ಮಳೆಯ ಸಂದರ್ಭ ಕೆಲಸದ ಸ್ಥಳಕ್ಕೆ ತೆರಳಿ ವಿವಿಧ ಔಷಧಿಗಳನ್ನು ಸಿದ್ದಗೊಳಿಸಿ ಇನ್ನೇನು ಮರವೇರಿ ಸಿಂಪರಣೆ ತೊಡಗಬೇಕು ಎನ್ನುವಷ್ಟರಲ್ಲಿ ಮಳೆ ಆಗಮಿಸಿ ಒಟ್ಟು ಕೆಲಸನ್ನು ಬುಡಮೇಲುಗೊಳಿಸುವುದರ ಜೊತೆಗೆ ತಯಾರಿಸಿದ ಔಷಧಿ ಮಿಶ್ರಣ ಉಪಯೋಗಶೂನ್ಯವಾಗುವ ರೈತರ ಸಮಸ್ಯೆಗೆ ರಾಮಕೃಷ್ಣರು ಈ ಮೂಲಕ ಪರಿಹಾರ ಒದಗಿಸಿ ಸ್ತುತ್ಯರ್ಹರಾಗಿದ್ದಾರೆ.
ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ಕಾಲಗಳಿಂದ ಕೊಯ್ಲು ಕಾರ್ಮಿಕರಾಗಿರುವ ರಾಮಕೃಷ್ಣರು ಹೆಚ್ಚಿನ ವಿದ್ಯಾಭ್ಯಾಸ ವಂಚಿತರು. ಕಳೆದ ಕೆಲವು ವರ್ಷಗಳ ಹಿಂದೆ ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ತಮ್ಮ ಮಕ್ಕಳ ಆನ್ ಲೈನ್ ಪಾಠಕ್ಕಾಗಿ ಸ್ಮಾರ್ಟ್ ಪೋನ್ ಒಂದನ್ನು ಮೊತ್ತಮೊದಲು ಖರೀದಿಸಿದ್ದ ಇವರು ಬಳಿಕ ಅದರೊಳಗೆ ಒಂದೊಂದೇ ಆಫ್ ಗಳ ಬಗ್ಗೆ ತಿಳಿಯುತ್ತಾ ಹೋದಂತೆ ಅವರಿಗೆ ಅವರ ಉದ್ಯೋಗ ಸಂಬಂಧವಾದ ವೆದರ್ ಆಫ್ ಗಮನ ಸೆಳೆಯಿತು. ಆ ಬಳಿಕ ಅದನ್ನು ಬಳಸಿ ತಮ್ಮ ಉದ್ಯೋಗವನ್ನು ಉನ್ನತೀಕರಿಸಿದರು.
ನೆಟ್ಟಣಿಗೆಯ ಪ್ರಗತಿಪರ ಕೃಷಿಕ, ತಂತ್ರಜ್ಞ ರಾಜಗೋಪಾಲ ಕೈಪಂಗಳ ಅವರು ಇದೀಗ ರಾಮಕೃಷ್ಣರ ತಂತ್ರಜ್ಞಾನ ಆಧಾರಿತ ಕಾರ್ಮಿಕ ಕೆಲಸ ಸಾಧನೆಯನ್ನು ಗುರುತಿಸಿ ವಿಜಯವಾಣಿಯ ಗಮನಕ್ಕೆ ತಂದಿದ್ದಾರೆ.
ಅಭಿಮತ:
ವೆದರ್ ಆಫ್ ಮೂಲಕ ಕೊಯ್ಲು, ಔಷಧಿ ಸಿಂಪರಣೆಯ ಸುಗಮತೆ ಸುಲಬೋಪಾಯವಾಗಿ ತನಗೆ ಬಹಳ ಉಪಯುಕ್ತವಾಗಿದೆ. ಈವರೆಗೆ ನೂರಕ್ಕೆ ನೂರು ಈ ಆಫ್ ಮೂಲಕ ನಿರೀಕ್ಷಿಒಸಿ ಹವಾಮಾನ ಸೂಚನೆ ಯಶಸ್ವಿಯಾಗಿದೆ. ಇದರಿಂದ ಕೃಷಿಕರ ಸಮಯ, ವ್ಯಯಿಸುವ ಹಣ ಉಳಿತಾಯವಾಗುತ್ತಿದೆ. ಇಂತಹ ತಂತ್ರಜ್ಞಾನ ಆಧರಿಸಿ ನಮ್ಮ ದಿನನಿತ್ಯದ ವ್ಯವಸ್ಥೆಗಳಿಗೆ ಬಳಕೆಯಾದಾಗ ಬದುಕು ಸುಗಮವಾಗುತ್ತದೆ.
-ರಾಮಕೃಷ್ಣ ಇಳಂತೋಡಿ
ತಂತ್ರಜ್ಞಾನ ಆಧಾರಿತ ಕೊಯ್ಲು ನಡೆಸುವ ಕಾರ್ಮಿಕ
2)-ರಾಮಕೃಷ್ಣ ಅವರ ಹೊಸ ಬಗೆಯ ತಂತ್ರಜ್ಞಾನ ಬಳಕೆ ನಿಜವಾಗಿಯೂ ಸ್ತುತ್ಯರ್ಹ, ಅನುಕರಣೀಯ. ತಂತ್ರಜ್ಞಾನಗಳನ್ನು ಈ ರೀತಿ ಪ್ರತಿಯೊಬ್ಬರೂ ಬಳಕೆ ಮಾಡಿದಾಗ ನಮಗೊದಗಿಸಿರುವ ವ್ಯವಸ್ಥೆ ಸಮರ್ಥವಾಗಿ ಬಳಕೆಯಾಗಿ ನಮಗೆ ಯಶಸ್ಸಿನ ಕೀರ್ತಿ ಪಥಕ್ಕೆ ದಾರಿಯಾಗುತ್ತದೆ.
-ರಾಜಗೋಪಾಲ ಕೈಪಂಗಳ
ಪ್ರಗತಿಪರ ಕೃಷಿಕ, ಕೃಷಿ ತಂತ್ರಜ್ಞ.





.jpg)
.jpg)
