ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಅನುಗ್ರಹದೊಂದಿಗೆ ಶ್ರೀಮಠದ 36 ಯತಿಗಳ ದಿವ್ಯ ಸಾನ್ನಿಧ್ಯವಿರುವ ಸ್ವರ್ಣಪಾದುಕಾ ಸವಾರಿಗೆ ಮುಳ್ಳೇರಿಯ ಹವ್ಯಕ ಮಂಡಲದ ನೀರ್ಚಾಲು ವಲಯದ ವತಿಯಿಂದ ಅದ್ಧೂರಿಯ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಮುಳ್ಳೇರಿಯ ಮಂಡಲ ವಿಷ್ಣುಗುಪ್ತ ವಿಶ್ವವಿದ್ಯಾಲಯ ಸಮಿತಿ ಅಧ್ಯಕ್ಷ, ಸಾಮಾಜಿಕ ಧಾರ್ಮಿಕ ಮುಂದಾಳು ಜಯದೇವ ಖಂಡಿಗೆ ಅವರ ನೇತೃತ್ವದಲ್ಲಿ ಧೂಳೀಪೂಜೆ ನಡೆಯಿತು. ಭಾನುವಾರ ಬೆಳಗ್ಗೆ ಭಿಕ್ಷಾಂಗ ಪಾದುಕಾ ಪೂಜೆ, ಭಿಕ್ಷೆ ನಡೆಯಿತು. ನಂತರ ಅಷ್ಟಾವಧಾನ ಸೇವೆ ನಡೆಯಿತು. ಸಂಗೀತ, ಭಜನೆ, ನೃತ್ಯ, ಯಕ್ಷಗಾನ, ವೇಣುವಾದನ, ವಯಲಿನ್, ನಾರಾಯಣೀಯಂ, ವೇದಮಂತ್ರ, ಅಷ್ಟಕ ಮೊದಲಾದ ಸೇವೆಗಳನ್ನು ಶಿಷ್ಯವೃಂದದವರು ನಡೆಸಿಕೊಟ್ಟರು. ನಂತರ ಸ್ವರ್ಣಪಾದುಕೆಗಳಿಗೆ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ಶ್ರೀಮಠದ ಆಚಾರವಿಚಾರ ಶಾಸ್ತ್ರಿಗಳು ಗಜಾನನ ಭಟ್ ಅವರು ಈ ಸಂದರ್ಭದಲ್ಲಿ ಸ್ವರ್ಣಪಾದುಕಾ ಸವಾರಿಯ ಬಗ್ಗೆ ಮಾತನಾಡಿದರು. ಭಾರತೀಯ ವಿದ್ಯೆ, ಕಲೆಗಳ ಬಗ್ಗೆ ಮುಂದಿನ ತಲೆಮಾರಿಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ. ಶ್ರೀಗಳ ಸಂಕಲ್ಪದಂತೆ ಗೋಕರ್ಣದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ತಲೆಯೆತ್ತಿದೆ. ಲಕ್ಷೋಪಲಕ್ಷ ಶಿಕ್ಷಣ ಸಂಸ್ಥೆಗಳಿದ್ದರೂ ಶ್ರೀಮಠವು ಭಾರತೀಯವಾದ ಸನಾತನ ಪದ್ಧತಿಯನ್ನು ಉಳಿಸಿಕೊಳ್ಳಬೇಕು, ಭಾರತೀಯ ವಿದ್ಯೆಕಲೆಗಳ ಉಳಿವಿಗಾಗಿ ವಿಷ್ಣುಗುಪ್ತ ವಿದ್ಯಾಪೀಠದೊಂದಿಗೆ ಮುಂದುವರಿಯುತ್ತಿದೆ. ಪುಣ್ಯಸಂಪಾದನೆಗಾಗಿ ಹಲವು ಧಾರ್ಮಿಕ ಕಾರ್ಯಗಳನ್ನು ಮಾಡುತ್ತೇವೆ. ಉತ್ತಮ ವಿದ್ಯಾರ್ಥಿಗಳ ಸಂಪಾದನೆಯೂ ಪುಣ್ಯಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಗಮನಹರಿಸಬೇಕು. ಇಲ್ಲಿ ಸಲ್ಲಿಸಲ್ಪಟ್ಟ ಎಲ್ಲ ಕಾಣಿಕೆಯೂ ವಿಷ್ಣುಗುಪ್ತ ವಿದ್ಯಾಪೀಠಕ್ಕೆ ಸಮರ್ಪಿತವಾಗಲಿದೆ ಎಂದರು.
ಮಹಾಜನ ವಿದ್ಯಾಸಂಸ್ಥೆಯ ಮುಖ್ಯಸ್ಥ ಜಯದೇವ ಖಂಡಿಗೆ ವಂದಿಸಿದರು. ಅಧ್ಯಾಪಕ ವೃಂದ, ಶ್ರೀಮಠದ ಶಿಷ್ಯಂದಿರು, ಗುರಿಕ್ಕಾರರು, ಮಂಡಲ ಹಾಗೂ ವಲಯ ಪದಾಕಾರಿಗಳು, ಭಗವದ್ಭಕ್ತರು ಪಾಲ್ಗೊಂಡಿದ್ದರು.

.jpg)
