ಕುಂಬಳೆ: ಕುಂಬಳೆ ಕೊಯಿಪ್ಪಾಡಿ ಸಮುದ್ರದಲ್ಲಿ ಮತ್ತೆ ಶಂಕಿತ ರಾಸಾಯನಿಕ ಬ್ಯಾರೆಲ್‍ಗಳು ಅಲೆಗಳಲ್ಲಿ ತೇಲಿಬಂದಿದ್ದು, ಸ್ಥಳೀಯ ಮೀನುಗರರು ನೀಡಿದ ಮಾಹಿತಿಯನ್ವಯ ವಿಪತ್ತು ನಿವಾರಣಾ ಪ್ರಾಧಿಕಾರ ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಎರಡೂ ಬ್ಯಾರಲ್‍ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಭಾನುವಾರವೂ ಎರಡು ಬ್ಯಾರೆಲ್‍ಗಳು ಕೊಯಿಪ್ಪಾಡಿ ಕರಾವಳಿಯಲ್ಲಿ ದಡ ಸೇರಿತ್ತು. ಬ್ಯಾರೆಲ್‍ನೊಳಗೆ ನೈಟಿಕ್ ಆಸಿಡ್ ಒಳಗೊಂಡಿರಬೇಕೆಂದು ಸಂಶಯಿಸಲಾಗಿದ್ದು, ಈ ಬ್ಯಾರಲ್‍ಗಳನ್ನು ಅನಂತಪುರದ ಕೈಗಾರಿಕಾ ಪ್ರಾಂಗಣದ ಸಂರಕ್ಷಿತ ಪ್ರದೇಶದಲ್ಲಿ ದಾಸ್ತಾನಿರಿಸಲಾಗಿದೆ. ಗುಜರಾತಿನ ಪೋರ್‍ಬಂದರ್‍ನಿಂದ ಆಗಮಿಸಲಿರುವ ಮೆರೈನ್ ಎಮರ್ಜೆನ್ಸ್ ರೆಸ್ಪಾನ್ಸ್ ಟೀಂ ಬ್ಯಾರಲ್‍ನಲ್ಲಿರುವ ರಾಸಾಯನಿಕ ತಪಾಸಣೆಗೈಯಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

