ಕುಂಬಳೆ: ಪುತ್ತಿಗೆ ಕೃಷಿ ಭವನ ವ್ಯಾಪ್ತಿಯಲ್ಲಿರುವ 300ಕ್ಕೂ ಹೆಚ್ಚು ಕೃಷಿಕರ ನೀರಾವರಿ ಮೋಟಾರ್ ಬಿಲ್ ಕೃಷಿ ಭವನ ಪಾವತಿಸದಿರುವುದರಿಂದ ನಾಲ್ಕು ವರ್ಷದ ಮೊತ್ತವಾಗಿ 30 ಸಾವಿರ ದಿಂದ 70 ಸಾವಿರ ರೂಪಾಯವರೆಗೆ ಬಾಕಿ ಉಳಿದುಕೊಂಡಿದೆ. ಈ ಕಾರಣದಿಂದ ವಿದ್ಯುತ್ ಬಿಲ್ ಪಾವತಿಸಲಿರುವ ಕೃಷಿಕರ ವಿದ್ಯುತ್ ಸಂಪರ್ಕವನ್ನು ವಿಚ್ಛೇಧಿಸುವುದಾಗಿ ಕೆಎಸ್‍ಇಬಿ ಬೆದರಿಕೆಯೊಡ್ಡುತ್ತಿದೆ ಎಂದು ಪುತ್ತಿಗೆ ಪಂಚಾಯತಿ ಕಿಸಾನ್ ಸೇನೆ ಆರೋಪಿಸಿದೆ.
ಉಚಿತ ವಿದ್ಯುತ್ ಎಂದು ಭರವಸೆ ನೀಡಿ ಇದೀಗ ಭಾರೀ ಮೊತ್ತ ಪಾವತಿಸಬೇಕಾಗುವುದರಿಂದ ಕೃಷಿಕರು ಸಂದಿಗ್ದತೆ ಎದುರಿಸುತ್ತಿದ್ದಾರೆ. ಕಂಗು ಕೃಷಿಗೆ ಬಾಧಿಸಿದ ಅಜ್ಞಾತ ರೋಗದಿಂದಾಗಿ ಶೇ.80ರಷ್ಟು ಬೆಳೆ ಹಾನಿಗೊಂಡಿದೆ. ಆದ್ದರಿಂದ ಕೃಷಿಕರು ವಿದ್ಯುತ್ ಇಲಾಖೆಗೆ ಪಾವತಿಸಬೇಕಾಗಿರುವ ಎಲ್ಲಾ ಮೊತ್ತವನ್ನು ಕೃಷಿ ಭವನ ಪಾವತಿಸಬೇಕೆಂದು ಕಿಸಾನ್ ಸೇನೆ ಒತ್ತಾಯಿಸಿದೆ.
ರೋಗ ಬಾಧಿಸಿ ನಾಶಗೊಂಡ ಕಂಗು ಕೃಷಿಗೆ ಪಂಚಾಯತಿಯಿಂದ ಫಂಡ್ ಬಳಸಿ ಔಷಧಿ ಸಿಂಪಡಿಸಬೇಕು. ಕೃಷಿಕರ ವಿರುದ್ಧ ಕೃಷಿ ಇಲಾಖೆ ತೋರಿಸುವ ಅವಗಣನೆಯನ್ನು ಕಿಸಾನ್ ಸೇನೆ ತೀವ್ರವಾಗಿ ಪ್ರತಿಭಟಿಸಿದೆ. ಕೃಷಿಕರ ಸಮಸ್ಯೆಗೆ ತುರ್ತಾಗಿ ಪರಿಹಾರ ಕಾಣಬೇಕೆಂದೂ ಇಲ್ಲದಿದ್ದಲ್ಲಿ ಚಳವಳಿಗೆ ರೂಪು ನೀಡಬೇಕಾಗಿ ಬರಲಿದೆಯೆಂದು ಸಂಘಟನೆ ತಿಳಿಸಿದೆ.
ಕಿಸಾನ್ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶುಕೂರ್ ಕಾನಾಜೆ ಕಿಸಾನ್ ಸೇನೆಯ ಸಭೆ ಉದ್ಘಾಟಿಸಿದರು. ಸುರೇಶ್ ಅಡ್ಕತ್ತೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ಹಾಜಿ ಕಂಡತ್ತಿಲ್, ಪ್ರಸಾದ್ ಕಕ್ಕೆಪ್ಪಾಡಿ, ಎಂ.ಇಸ್ಮಾ ಯಿಲ್ ಹಾಜಿ ಮಾತನಾಡಿದರು. ಬಾಲಸುಬ್ರಹ್ಮಣ್ಯ ಭಟ್ ಚಕ್ಕಣಿಕೆ ಸ್ವಾಗತಿಸಿ, ಸೀತಾರಾಮ ಮಾಣಬೈಲು ವಂದಿಸಿದರು.
ನೂತನ ಪದಾಧಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಬಾಲಸುಬ್ರಹ್ಮಣ್ಯ ಭಟ್ ಚಕ್ಕಣಿಕೆ, ಉಪಾಧ್ಯಕ್ಷರಾಗಿ ಅಬ್ದುಲ್ಲ ಕಂಡತ್ತಿಲ್, ಸೀತಾರಾಮ ಮಾಣಬೈಲು, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಅಡ್ಕತ್ತೊಟ್ಟಿ, ಜೊತೆ ಕಾರ್ಯದರ್ಶಿಯಾಗಿ ಪ್ರಸಾದ್ ಕಕ್ಕೆಪ್ಪಾಡಿ, ಕೃಷ್ಣ ಅಡ್ಕತ್ತೊಟ್ಟಿ, ಕೋಶಾಧಿಕಾರಿಯಾಗಿ ಅಹಮ್ಮದ್ ಅಲಿ ಕಾನಾಜೆ ಆಯ್ಕೆಗೊಂಡರು.




.jpg)
