ಮಂಜೇಶ್ವರ: ವರ್ಕಾಡಿಯ ನಲ್ಲೆಂಗಿ ನಿವಾಸಿ ಲೂಯಿಸ್ ಮೊಂತೇರೊ ಅವರ ಪತ್ನಿ ಹಿಲ್ಡಾ ಮೊಂತೆರೋ (65)ಅವಮೃ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಲೆಗೈಯಲು ಆರ್ಥಿಕ ಸಂದಿಗ್ಧತೆ ಕಾರಣವೆನ್ನಲಾಗಿದೆ. ತಾಯಿಯಲ್ಲಿ ಹಣ ನೀಡುವಂತೆ ಕೇಳಿದ್ದು, ಹಣ ನೀಡದಿರುವ ದ್ವೇಷದಿಂದ ಕೊಲೆ ನಡೆಸಿರುವುದಾಗಿ ಹಿಲ್ಡಾ ಮೊಂತೆರೋ ಅವರ ಪುತ್ರ ಮೆಲ್ವಿನ್ ಮೊಂತೆರೋ ಪೊಲೀಸರಲ್ಲಿ ತಿಳಿಸಿದ್ದಾನೆ. ಜಾಗದ ದಾಖಲೆಪತ್ರ ಅಡವಿರಿಸಿ ಒಂದು ಲಕ್ಷ ನೀಡುವಂತೆ ತಾಯಿಯನ್ನು ಒತ್ತಾಯಿಸಿದ್ದು, ಇದಕ್ಕೆ ತಾಯಿ ಸಮ್ಮತಿಸದಿರುವುದೇ ಕೊಲೆಗೆ ಕಾರಣವೆನ್ನಲಾಗಿದೆ. ಆದರೆ, ಆರೋಪಿ ತದ್ವಿರುದ್ಧ ಹೇಳಿಕೆ ನೀಡುತ್ತಿರುವುದರಿಂದ ಸಮಗ್ರ ತನಿಖೆಗೆ ಒಳಪಡಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಟ್ಟಡ ನಿರ್ಮಾಣ ಕಾರ್ಮಿಕನಾಗಿರುವ ಮೆಲ್ವಿನ್ ಮೊಂತೆರೋ, ಕಳೆದ ಒಂದು ವಾರದಿಂದ ಕೆಲಸವಿಲ್ಲದೆ ಮನೆಯಲ್ಲೇ ಉಳಿದಿದ್ದನು. ಈತ ನಿರಂತರ ಮದ್ಯ ಸೇವಿಸುತ್ತಿದ್ದನೆಂದೂ ಪೊಲೀಸರು ತಿಳಿಸಿದ್ದಾರೆ.
ಗುರುವಾರ ನಸುಕಿಗೆ ಭಯಾನಕ ಕೃತ್ಯ ನಡೆದಿದ್ದು, ಹಿಲ್ಡಾ ಮೊಂತೆರೋ (65)ಅವರನ್ನು ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಲೆ ನಡೆಸಿರುವುದಲ್ಲದೆ, ನೆರೆಮನೆ ನಿವಾಸಿ ಹಾಗೂ ಸಂಬಂಧಿ ವಿಕ್ಟರ್ ಎಂಬವರ ಪತ್ನಿ ಲೊಲಿಟ ಅವರ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಇದರಿಂದ ಲೊಲಿಟಾ ಗಂಭೀರ ಸುಟ್ಟ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆಗೈದ ನಂತರ ಕೊಲ್ಲೂರು ಭಾಗಕ್ಕೆ ಪರಾರಿಯಾಘಿದ್ದ ಈತನನ್ನು ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಿಂದ ಅಲ್ಲಿನ ಪೊಲೀಸರು ಬಂಧಿಸಿದ್ದು, ಮಂಜೇಶ್ವರ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದರು. ಈ ಮಧ್ಯೆ ಹಿಲ್ಡಾ ಮೊಂತೆರೋ ಅವರ ಮೃತದೇಹ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶವಮಹಜರು ನಡೆಸಿದ ನಂತರ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ.


