ಬದಿಯಡ್ಕ: ಕುಂಬಳೆ ಮುಳ್ಳೇರಿಯ ಕೆಎಸ್‍ಟಿಪಿ ರಸ್ತೆಯ ವಿವಿಧೆಡೆಗಳಲ್ಲಿ ನಿರಂತರ ಅಪಘಾತಗಳು ನಡೆಯುತ್ತಿರುವುದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ವಾಹನಗಳ ಅತಿಯಾದ ವೇಗದಿಂದ ಈ ಅಪಘಾತಗಳಿಗೆ ನಡೆಯುತ್ತದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಕನ್ನೆಪ್ಪಾಡಿಯಿಂದ ನೀರ್ಚಾಲು ತನಕದ ರಸ್ತೆಯ ಮದ್ಯೆ ಭಾನುವಾರ ಮಧ್ಯಾಹ್ನ ವೇಳೆ ಕಾರಿಗೆ ಬೇರೊಂದು ಕಾರು ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಸೂಚನಾ ಫಲಕಗಳ ಕೊರತೆಯು ಅತಿಯಾದ ವೇಗಕ್ಕೆ ಕಾರಣವಾಗಿದೆ. ಈ ರಸ್ತೆಯ ಮಧ್ಯದಲ್ಲಿ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸದಿರುವುದರಿಂದ ನಿರಂತರ ಅಪಘಾತವುಂಟಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.
ಜೇನುಮೂಲೆ ಎಂಬಲ್ಲಿ ಅನೇಕರು ಬಸ್ಸಿಗೆ ಕಾದು ನಿಲ್ಲುತ್ತಿದ್ದು, ಪ್ರಯಾಣಿಕರಿಗಾಗಿ ಬಸ್ಸು ನಿಲ್ಲಿಸಿದಾಗ ಹಿಂದಿನ ವಾಹನಗಳಿಗೆ ಸಮಸ್ಯೆಯುಂಟಾಗುತ್ತಿದೆ. ರಸ್ತೆದಾಟಲೂ ಪ್ರಯಾಣಿಕರು ಕಷ್ಟಪಡಬೇಕಾಗಿದೆ. ಇತ್ತೀಚೆಗಷ್ಟೇ ನೀರ್ಚಾಲು ಕಟ್ಟೆಯ ಸಮೀಪ ಬೈಕ್ ಸವಾರರೋರ್ವರಿಗೆ ವೇಗವಾಗಿ ಬಂದ ಕಾರು ಢಿಕ್ಕಿಹೊಡೆದು ಅಪಘಾತವುಂಟಾಗಿದೆ. ಕನ್ನೆಪ್ಪಾಡಿ ನೀರ್ಚಾಲಿನ ಮಧ್ಯೆಭಾಗ ಎರಡೂ ಬದಿಗಳಲ್ಲಿ ಅನೇಕ ಮನೆಗಳಿರುವುದರಿಂದ ಅಲ್ಲಲ್ಲಿ ಮನೆಗಳಿಗೆ ತೆರಳುವ ರಸ್ತೆಗಳಿವೆ. ವಾಹನಗಳನ್ನು ತಿರುಗಿಸುವ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ವಾಹನಗಳು ಬರುವುದು ಚಾಲಕರ ಗಮನಕ್ಕೆ ಬಾರದೇ ಅಪಘಾತವುಂಟಾದ ಘಟನೆಗಳೂ ಇವೆ. ಅಧಿಕೃತರಿಗೆ ಈ ಸಂಬಂಧ ಮನವಿಯನ್ನು ನೀಡಲಾಗಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.




.jpg)
