ಕುಂಬಳೆ: ಬಾಡೂರು ಸನಿಹದ ಓಣಿಬಾಗಿಲು ಅರಣೆಗುರಿ ಎಂಬಲ್ಲಿ ಏಳರ ಹರೆಯದ ಬಾಲಕಿ ತೋಡಿಗೆ ಬಿದ್ದು ಮೃತಪಟ್ಟಿದ್ದಾಳೆ. ಇಲ್ಲಿನ ನಿವಾಸಿ, ಮಹಮ್ಮದ್-ಖದೀಜತ್ತುಲ್ ಕುಬ್ರಾ ದಂಪತಿ ಪುತ್ರಿ ಫಾತಿಮತ್ ಹಿಬಾ ಮೃತಪಟ್ಟ ಬಾಲಕಿ. ಶಾಲೆಗೆ ರಜೆಯಾಗಿದ್ದ ಹಿನ್ನೆಲೆಯಲ್ಲಿ ಮನೆಯಲ್ಲೇ ಆಟವಾಡುತ್ತಿದ್ದ ಬಾಲಕಿ, ಮಳೆ ಅಲ್ಪ ಕಡಿಮೆಯಾಗುತ್ತಿದ್ದಂತೆ ಸಂಜೆ ವೇಳೆ ಮನೆಯಿಂದ ಹೊರ ಹೋಗಿದ್ದಳು. ಮಗು ಬಹಳ ಹೊತ್ತಿನ ವರೆಗೂ ವಾಪಸಾಗದಿರುವುದರಿಂದ ಹುಡುಕಾಡಿದಾಗ ಬಾಲಕಿ ಮನೆ ಸನಿಹದ ಸಣ್ಣ ತೋಡಿನ ನೀರಿನಲ್ಲಿ ಕೊಚ್ಚಿಕೊಂಡುಹೋಗುತ್ತಿರುವುದು ಕಂಡುಬಂದಿದ್ದು, ಆಸುಪಾಸಿನವರು ಸೇರಿ ಬಾಲಕಿಯನ್ನು ನೀರಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಬಾಲಕಿ ಬಾಡೂರು ಎಎಲ್ಪಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.

