ನವದೆಹಲಿ : ರೇರ್ ಅರ್ಥ್ ಮ್ಯಾಗ್ನೆಟ್‌ಗಳನ್ನು ಭಾರತದಲ್ಲಿಯೇ ಉತ್ಪಾದಿಸುವುದಕ್ಕೆ ಸಬ್ಸಿಡಿ ನೀಡುವ ಯೋಜನೆ ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರವು ಇನ್ನು 15ರಿಂದ 20 ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಯೋಜನೆಯ ಅಡಿಯಲ್ಲಿ ಎಷ್ಟು ಮೊತ್ತದ ಸಬ್ಸಿಡಿ ಒದಗಿಸಬೇಕು ಎಂಬುದನ್ನು ತೀರ್ಮಾನಿಸಲು ಭಾಗೀದಾರರ ಜೊತೆ ಸಮಾಲೋಚನೆ ನಡೆಯುತ್ತಿದೆ. ಸಬ್ಸಿಡಿ ರೂಪದಲ್ಲಿ ನೀಡುವ ಮೊತ್ತವು ₹1,000 ಕೋಟಿಗಿಂತ ಹೆಚ್ಚಾದರೆ ಆಗ ಯೋಜನೆಯನ್ನು ಸಂಪುಟದ ಅನುಮೋದನೆಗೆ ಕಳುಹಿಸಲಾಗುತ್ತದೆ ಎಂದು ಬೃಹತ್ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿ ಕಮ್ರನ್ ರಿಜ್ವಿ ತಿಳಿಸಿದ್ದಾರೆ.
'ಹೈದರಾಬಾದ್ ಮೂಲದ ಒಂದು ಕಂಪನಿಯು ಆಸಕ್ತಿ ತೋರಿಸಿದೆ. ಈ ವರ್ಷದ ಅಂತ್ಯದ ವೇಳೆಗೆ 500 ಟನ್ ಉತ್ಪಾದನೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಗಣಿ ಸಚಿವರ ಜೊತೆ ಸಮಾಲೋಚನೆ ನಡೆಸಿದ್ದೇವೆ. ನಮ್ಮ ಕಾರ್ಯದರ್ಶಿ ಹಾಗೂ ನಮ್ಮ ಸಚಿವಾಲಯವು ಒಂದಿಷ್ಟು ಕೆಲಸ ಮಾಡುತ್ತಿದೆ. ಇನ್ನು 15-20 ದಿನಗಳಲ್ಲಿ ಒಂದು ತೀರ್ಮಾನ ಆಗಲಿದೆ' ಎಂದು ಕುಮಾರಸ್ವಾಮಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ರೇರ್ ಅರ್ಥ್ ಮ್ಯಾಗ್ನೆಟ್‌ಗಳ ರಫ್ತಿನ ಮೇಲೆ ಚೀನಾ ಈಚೆಗೆ ನಿರ್ಬಂಧ ವಿಧಿಸಿರುವ ಕಾರಣದಿಂದಾಗಿ ವಾಹನ ಮತ್ತು ಸೆಮಿಕಂಡಕ್ಟರ್ ಚಿಪ್‌ಗಳ ತಯಾರಿಕೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗಿದೆ.
ರೇರ್ ಅರ್ಥ್ ಮ್ಯಾಗ್ನೆಟ್‌ಗಳ ಉತ್ಪಾದನೆಗೆ ಅಂದಾಜು ಎರಡು ವರ್ಷಗಳು ಬೇಕಾಗಬಹುದು. ಅಲ್ಲಿಯವರೆಗೆ ಇವುಗಳನ್ನು ಜಪಾನ್, ವಿಯೆಟ್ನಾಂ ಒಳಗೊಂಡಂತೆ ಇತರ ಪರ್ಯಾಯ ಮೂಲಗಳಿಂದ ತರಿಸಿಕೊಳ್ಳಲು ಸರ್ಕಾರವು ಉದ್ಯಮ ವಲಯದ ಜೊತೆ ಸೇರಿ ಕೆಲಸ ಮಾಡುತ್ತಿದೆ ಎಂದು ರಿಜ್ವಿ ಹೇಳಿದ್ದಾರೆ.
ಸಬ್ಸಿಡಿ ಮೂಲಕ ಕೊಡುವ ಮೊತ್ತವು ₹1,000 ಕೋಟಿಗಿಂತ ಕಡಿಮೆ ಇದ್ದರೆ ಸಚಿವ ಕುಮಾರಸ್ವಾಮಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹಂತದಲ್ಲಿಯೇ ಅದಕ್ಕೆ ಅನುಮೋದನೆ ಸಿಗಬಹುದು. ಮೊತ್ತವು ಅದಕ್ಕಿಂತ ಜಾಸ್ತಿ ಇದ್ದರೆ ಮಾತ್ರ ಸಂಪುಟದ ಒಪ್ಪಿಗೆ ಬೇಕಾಗುತ್ತದೆ ಎಂದು ರಿಜ್ವಿ ತಿಳಿಸಿದ್ದಾರೆ.




