ಆರ್ಥಿಕ ವಹಿವಾಟಿಗಾಗಿ ನಾವು ವಿವಿಧ ರೀತಿಯ ಅಧಿಕೃತ ಕಾರ್ಡ್ (Official Documents) ಗಳನ್ನು ಹೆಚ್ಚಾಗಿ ಬಳಸುತ್ತೇವೆ. ಅದರಲ್ಲಿ ಆಧಾರ್, ಪಾನ್ ಕಾರ್ಡ್ (PAN), ಪಾಸ್ ಪೋರ್ಟ್ (passport), ಮತದಾರರ ಗುರುತಿನ ಚೀಟಿ (Voter ID), ಡ್ರೈವಿಂಗ್ ಲೈಸನ್ಸ್. (Driving License) ಹೀಗೆ ಇನ್ನು ಹಲವು ದಾಖಲೆಗಳು ಸೇರಿವೆ. ಆದರೆ ಇವುಗಳನ್ನು ವ್ಯಕ್ತಿಯ ಮರಣದ ಬಳಿಕ ರದ್ದುಗೊಳಿಸಬೇಕು. ಇಲ್ಲವಾದರೆ ಇವು ದುರುಪಯೋಗವಾಗುವ ಸಾಧ್ಯತೆಗಳಿರುತ್ತವೆ. ವ್ಯಕ್ತಿಯ ಮರಣದ ಬಳಿಕ ಅವರ ಪಾನ್, ಆಧಾರ್, ಪಾಸ್‌ಪೋರ್ಟ್ ಮೊದಲಾದ ವಿವಿಧ ಸರ್ಕಾರಿ ದಾಖಲೆಗಳನ್ನು ನಿರ್ವಹಿಸುವುದು ಹೇಗೆ ಎನ್ನುವುದನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು.
ಕುಟುಂಬ ಸದಸ್ಯರ ಸಾವು ಪ್ರತಿಯೊಬ್ಬರಿಗೂ ಭಾವನಾತ್ಮಕ ಸವಾಲುಗಳನ್ನು ಒಡ್ಡುತ್ತದೆ. ಈ ನಡುವೆ ನಾವು ನಮ್ಮ ಕೆಲವೊಂದು ಜವಾಬ್ದಾರಿಗಳನ್ನು ನಿರ್ವಹಿಸಲೇಬೇಕು. ಅವುಗಳಲ್ಲಿ ಅವರ ಅಧಿಕೃತ ದಾಖಲೆಗಳಾದ ಪಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಮತದಾರರ ಗುರುತು ಚೀಟಿಯಂತಹ ದಾಖಲೆಗಳನ್ನು ರದ್ದು ಪಡಿಸುವುದು ಕೂಡ ಸೇರಿದೆ.
ಕುಟುಂಬ ಸದಸ್ಯರು ಸಾವನ್ನಪ್ಪಿದ ಬಳಿಕ ಅವರ ಕಾನೂನುಬದ್ಧ ಉತ್ತರಾಧಿಕಾರಿಗಳು ಮೃತರ ದಾಖಲೆಗಳನ್ನು ಯಾವ ರೀತಿಯಲ್ಲಿ ನಿರ್ವಹಿಸಬೇಕು ಎನ್ನುವುದಕ್ಕೆ ಯಾವುದೇ ನಿಯಮಗಳಿಲ್ಲ. ಆದರೂ ಈ ದಾಖಲೆಗಳನ್ನು ವಂಚನೆ ಅಥವಾ ಅಕ್ರಮ ಹಣಕಾಸು ವಹಿವಾಟುಗಳಿಗೆ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಅವುಗಳನ್ನು ಸರಿಯಾಗಿ ನಿರ್ವಹಿಸುವುದು ಬಹುಮುಖ್ಯವಾಗಿದೆ.
ಪಾನ್ ಕಾರ್ಡ್
ಆದಾಯ ತೆರಿಗೆ ರಿಟರ್ನ್, ಬ್ಯಾಂಕ್ ಸಂಬಂಧಿ ವ್ಯವಹಾರಗಳಿಗೆ ಬಳಕೆಯಾಗುವ ಪಾನ್ ಕಾರ್ಡ್ ಖಾತೆಗಳನ್ನುಮುಚ್ಚಲು ಆದಾಯ ತೆರಿಗೆ ಇಲಾಖೆಗೆ ಅದನ್ನು ಒಪ್ಪಿಸಬೇಕು. ಪಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಲು ಪಾನ್ ನೋಂದಾಯಿಸಲಾದ ಅಸೆಸಿಂಗ್ ಅಧಿಕಾರಿ (AO) ಗೆ ಅರ್ಜಿಯನ್ನು ಬರೆದು ಮೃತರ ಹೆಸರು, ಪಾನ್, ಜನ್ಮ ದಿನಾಂಕ ಮತ್ತು ಮರಣ ಪ್ರಮಾಣಪತ್ರದ ಪ್ರತಿಯನ್ನು ಲಗತ್ತಿಸಿ ಕಳುಹಿಸಬೇಕು.
ಆಧಾರ್ ಕಾರ್ಡ್
ಗುರುತು ಮತ್ತು ವಿಳಾಸದ ಪುರಾವೆಯಾಗಿ ಬಳಸಲ್ಪಡುವ ಆಧಾರ್ ಸಂಖ್ಯೆಯನ್ನು ಸಾಮಾನ್ಯವಾಗಿ ಎಲ್‌ಪಿಜಿ ಸಬ್ಸಿಡಿ, ವೇತನ ಮತ್ತು ಇಪಿಎಫ್ ಖಾತೆಗಳಂತಹ ನಿರ್ಣಾಯಕ ಸೇವೆಗಳಿಗೆ ಬಳಸಲಾಗುತ್ತದೆ. ಇದನ್ನು ನಿಷ್ಕ್ರಿಯಗೊಳಿಸಲು ಅಥವಾ ರದ್ದುಗೊಳಿಸಲು ಯಾವುದೇ ನಿಯಮಗಳಿಲ್ಲ. ಆದರೂ ಇದು ದುರುಪಯೋಗವಾಗದಂತೆ ತಡೆಯಲು ಆಧಾರ್‌ಗೆ ಸಂಬಂಧಿಸಿದ ಬಯೋಮೆಟ್ರಿಕ್ ಡೇಟಾವನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ವೆಬ್‌ಸೈಟ್ ಮೂಲಕ ಲಾಕ್ ಮಾಡಿ ಸುರಕ್ಷಿತವಾಗಿರಿಸಬೇಕು.
ಚಾಲನಾ ಪರವಾನಗಿ
ಮೃತರ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲು ಯಾವುದೇ ನಿಯಮ ಇಲ್ಲ. ಆದರೂ ಚಾಲನಾ ಪರವಾನಗಿಗಳನ್ನು ರದ್ದುಗೊಳಿಸಲು ಪ್ರತಿ ರಾಜ್ಯವು ತನ್ನದೇ ಆದ ನಿಯಮಗಳನ್ನು ಹೊಂದಿದೆ. ಇದಕ್ಕಾಗಿ ಪ್ರಾದೇಶಿಕ ಸಾರಿಗೆ ಕಚೇರಿ (RTO) ಯನ್ನು ಸಂಪರ್ಕಿಸಬಹುದು. ಅಲ್ಲದೇ ಮೃತರ ಹೆಸರಿನಲ್ಲಿ ನೋಂದಾಯಿಸಲಾದ ವಾಹನಗಳನ್ನು ಉತ್ತರಾಧಿಕಾರಿ ಹೆಸರಿಗೆ ವರ್ಗಾಯಿಸಲು ಕೆಲವೊಂದು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ಇದನ್ನು ಪ್ರಾದೇಶಿಕ ಸಾರಿಗೆ ಕಚೇರಿಯಿಂದ ದೃಢೀಕರಿಸಬೇಕಾಗುತ್ತದೆ.




