ನವದೆಹಲಿ: ಮುಂಬರುವ ಜನಗಣತಿ ವೇಳೆ ಜಾತಿ ಗಣತಿಯನ್ನು ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ, ಈ ವೇಳೆ, ವೈಯಕ್ತಿಕವಾಗಿ ಜಾತಿ ಮಾಹಿತಿ ಪಡೆಯಲಾಗುತ್ತದೆಯೇ ಹೊರತು ಸಾಮಾಜಿಕವಾಗಿ ಜಾತಿ ವರ್ಗೀಕರಣದ ಮಾಹಿತಿ ಸಂಗ್ರಹಿಸಲ್ಲ ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಅಂದರೆ ಎಸ್‌ಸಿ, ಎಸ್‌ಟಿ, ಒಬಿಸಿಗಳ ವರ್ಗೀಕರಣ ಇರುವುದಿಲ್ಲ. ದೇಶಾದ್ಯಂತ ಗಣತಿ ಕೈಗೊಳ್ಳುತ್ತಿರುವುದರಿಂದ ನಿರ್ದಿಷ್ಟ ಜಾತಿಯೊಂದು ಒಂದು ರಾಜ್ಯದಲ್ಲಿ ಒಬಿಸಿ ಪಟ್ಟಿಯಲ್ಲಿದ್ದರೆ, ಅದೇ ಜಾತಿಯು ಮತ್ತೊಂದು ರಾಜ್ಯದಲ್ಲಿ ಸಾಮಾನ್ಯ ಕೆಟಗರಿಯಲ್ಲಿರುತ್ತದೆ. ಹಾಗಾಗಿ, ಸಮಗ್ರ ಗಣತಿ ವೇಳೆ, ಜಾತಿ ವರ್ಗೀಕರಣ ಕೈಗೊಳ್ಳದಿರಲು ಸರ್ಕಾರ ನಿರ್ಧರಿಸಿದೆ.
ಗಣತಿ ವೇಳೆ ಪ್ರತಿಯೊಬ್ಬರು ತಮ್ಮ ಧರ್ಮದೊಂದಿಗೆ ಜಾತಿಯನ್ನು ನಮೂದಿಸಬೇಕಾಗುತ್ತದೆ. ಇದು ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಎಲ್ಲರಿಗೂ ಅನ್ವಯವಾಗಲಿದೆ ಎಂದು ವರದಿಗಳು ಹೇಳಿವೆ.




