ಸಾಂಗ್ಲಿ: ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ್ದಕ್ಕೆ ಆಕ್ರೋಶಗೊಂಡು ಸ್ವಂತ ಮಗಳನ್ನೇ ಶಿಕ್ಷಕರೊಬ್ಬರು ಥಳಿಸಿ ಕೊಂದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಜಿಲ್ಲೆಯ ಅಟ್ಪಾಡಿ ತಹಸಿಲ್‌ನ ನೆಲಕರಂಜಿ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಆರೋಪಿತ ಶಿಕ್ಷಕ ಧೋಂಡಿರಾಮ್ ಭೋಸಲೆ (45) ತಮ್ಮ ಮಗಳು ಸಾಧನಾ 12ನೇ ತರಗತಿಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಅಸಮಾಧಾನಗೊಂಡಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ಹೆಂಡತಿ ಮತ್ತು ಮಗನ ಎದುರಲ್ಲೇ ಹಿಟ್ಟು ರುಬ್ಬುವ ಕಲ್ಲಿನ ಮರದ ಹಿಡಿಕೆಯಿಂದ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಗಾಯಗೊಂಡಿದ್ದ ಬಾಲಕಿಯನ್ನು ಸಾಂಗ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ. ಗಾಯಗಳಿಂದ ಬಾಲಕಿ ಸಾವಿಗೀಡಾಗಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೃಢಪಟ್ಟಿದೆ ಎಂದು ಅಟ್ಪಾಡಿ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.




