HEALTH TIPS

ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾನಿಗಳು: ಡಾಕಿಂಗ್ ಪ್ರಕ್ರಿಯೆ ಪೂರ್ಣ

ನವದೆಹಲಿ: 'ಆಕ್ಸಿಯಂ-4' ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾನಿ ಶುಭಾಂಶು ಶುಕ್ಲಾ, ಹಂಗರಿ, ಪೋಲೆಂಡ್‌ನ ಗಗನಯಾತ್ರಿಗಳು ಯಶಸ್ವಿಯಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತಲುಪಿದ್ದಾರೆ. 

 ಗಗನಯಾತ್ರಿಗಳಿರುವ 'ಡ್ರ್ಯಾಗನ್‌' ಬಾಹ್ಯಾಕಾಶ ಕೋಶವನ್ನು ಹೊತ್ತ ಸ್ಪೇಸ್‌ಎಕ್ಸ್‌ನ 'ಫಾಲ್ಕನ್‌-9' ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಬುಧವಾರ ಮಧ್ಯಾಹ್ನ 12.01ಕ್ಕೆ (ಭಾರತೀಯ ಕಾಲಮಾನ) ಯಶಸ್ವಿಯಾಗಿ ಚಿಮ್ಮಿತ್ತು.

ಅದು ಸುಮಾರು 28 ಗಂಟೆಗಳ ಬಳಿಕ, ಅಂದರೆ ಇಂದು (ಗುರುವಾರ) ಸಂಜೆ 4 ಗಂಟೆಗೆ ಐಎಸ್‌ಎಸ್‌ನೊಂದಿಗೆ ಜೋಡಣೆಯಾಗಿದೆ (ಡಾಕಿಂಗ್‌) ಎಂದು ವರದಿಯಾಗಿದೆ.

ಬಾಹ್ಯಾಕಾಶ ನೌಕೆಯಿಂದ ವಿಡಿಯೊಲಿಂಕ್ ಮೂಲಕ ಶುಕ್ಲಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 'ನಾನು ಮಗುವಿನಂತೆ ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಗಳಲ್ಲಿ ಬದುಕಲು ಕಲಿಯುತ್ತಿದ್ದೇನೆ ಮತ್ತು ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್ ಮಾಡಲು ಭೂಮಿಯನ್ನು ಸುತ್ತುತ್ತಿರುವಾಗ ನಿರ್ವಾತದಲ್ಲಿ ತೇಲುವುದು ಅದ್ಭುತ ಅನುಭವ' ಎಂದು ಹೇಳಿದ್ದಾರೆ.

ಶುಕ್ಲಾ ಅವರೊಂದಿಗೆ, ಅಮೆರಿಕದ ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿಯ ಟಿರ್ಬೊ ಕಾಪು ಹಾಗೂ ಪೋಲೆಂಡ್‌ನ ಸ್ವವೋಶ್ ಓಜ್ನೈನ್‌ಸ್ಕಿ ವೀಶ್ನೀವುಫ್‌ಸ್ಕಿ ಪ್ರಯಾಣ ಕೈಗೊಂಡಿದ್ದಾರೆ. 14 ದಿನಗಳವರೆಗೆ ಐಎಸ್‌ಎಸ್‌ನಲ್ಲಿರುವ ಈ ಗಗನಯಾನಿಗಳು ವಿಜ್ಞಾನದ ಕುರಿತು 60ಕ್ಕೂ ಹೆಚ್ಚು ಪ್ರಯೋಗಗಳನ್ನು ಕೈಗೊಳ್ಳಲಿದ್ದಾರೆ. ವಿವಿಧ ತಾಂತ್ರಿಕ ಕಾರಣಗಳಿಂದ ಈ ಯೋಜನೆಯ ಉಡ್ಡಯನ ಆರು ಬಾರಿ ಮುಂದಕ್ಕೆ ಹೋಗಿತ್ತು.

ಅಮೆರಿಕದ ವಾಣಿಜ್ಯ ಯೋಜನೆಯಾದ ಇದನ್ನು, 'ನಾಸಾ', 'ಆಕ್ಸಿಯಂ ಸ್ಪೇಸ್‌' ಹಾಗೂ ಇಲಾನ್‌ ಮಸ್ಕ್‌ ಒಡೆತನದ 'ಸ್ಪೇಸ್‌ಎಕ್ಸ್‌' ಜಂಟಿಯಾಗಿ ರೂಪಿಸಿವೆ. ಭಾರತ, ಪೋಲೆಂಡ್‌, ಹಂಗರಿಯ ಗಗನಯಾನಿಗಳು ನಾಲ್ಕು ದಶಕಗಳ ಬಳಿಕ ಕೈಗೊಂಡಿರುವ ಬಾಹ್ಯಾಕಾಶ ಯಾನ ಇದಾಗಿದೆ. ಇದು ಮೂರೂ ದೇಶಗಳ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು, ಎರಡನೇ ಮಾನವ ಸಹಿತ ಬಾಹ್ಯಾಕಾಶಯಾನವೂ ಆಗಿದೆ.

ಭಾರತದ ರಾಕೇಶ್‌ ಶರ್ಮಾ ಅವರು ಗಗನಯಾನ ಕೈಗೊಂಡ 41 ವರ್ಷಗಳ ಬಳಿಕ ಭಾರತದ ಮತ್ತೊಬ್ಬ ಗಗನಯಾನಿ ಶುಭಾಂಶು ಶುಕ್ಲಾ ಅವರು ಅಂತರಿಕ್ಷ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಭಾರತದ ಚೊಚ್ಚಲ ಮಾನವಸಹಿತ ಗಗನಯಾನ ಬಾಹ್ಯಾಕಾಶ ಕಾರ್ಯಕ್ರಮವನ್ನು 2027ರಲ್ಲಿ ಕಾರ್ಯಗತಗೊಳಿಸಲು ಭಾರತದ ಬಾಹ್ಯಾಕಾಶ ಸಂಸ್ಥೆ 'ಇಸ್ರೊ' ನಿರ್ಧರಿಸಿದೆ. ಹೀಗಾಗಿ ಶುಕ್ಲಾ ಅವರ ಗಗನಯಾನವು ಭಾರತದ ಮಟ್ಟಿಗೆ ಮಹತ್ವದ್ದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries