ಕಾಸರಗೋಡು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೇತೃತ್ವದಲ್ಲಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕುಟುಂಬಶ್ರೀ ಜಿಲ್ಲಾ ಮಿಷನ್ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಆಚರಿಸಲಾಯಿತು.
ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಹಿರಿಯ ವಿಭಾಗೀಯ ಸಿವಿಲ್ ನ್ಯಾಯಾಧೀಶೆ ರುಕ್ಮಾ ಎಸ್ ರಾಜ್ ಉದ್ಘಾಟಿಸಿದರು. ಕಾನೂನುಗಳನ್ನು ಮೀರಿ ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಅವರು ಹೇಳಿದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಅಲ್ಪ ಮಟ್ಟಿಗೆ ತಡೆಗಟ್ಟಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿದ್ದು, ಮಕ್ಕಳನ್ನು ಮಧ್ಯವರ್ತಿಗಳಾಗಿ ಬಳಸಿಕೊಳ್ಳುವ ಮಾದಕ ದ್ರವ್ಯ ಸೇವನೆ ಮತ್ತು ಯುವಕರನ್ನು ಒಳಗೊಂಡ ಮರಳು ಮಾಫಿಯಾ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಇಂತಹ ಪರಿಸ್ಥಿತಿ ಎದುರಿಸಿ, ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಲ್ಳಲಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಿಭಾಗಾಧಿಕಾರಿ ಎ.ಪಿ. ಕೇಶವನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ , ವಕೀಲೆ ರೇಣುಕಾದೇವಿ ತಂಗಚ್ಚಿ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎಲ್.ಶೀಬಾ ವಿವಿಧ ವಿಷಯಗಳ ಕುರಿತು ತರಗತಿ ನಡೆಸಿಕೊಟ್ಟರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಎಂ.ಎ.ಶೋಭಾ, ಕುಟುಂಬಶ್ರೀ ಮಿಷನ್‍ಸಹಾಯಕ ಸಂಯೋಜಕ ಕೆ.ಎಂ. ಕಿಶೋರ್ ಕುಮಾರ್ ಉಪಸ್ಥಿತರಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪಿ, ಎಲ್.ವಿ. ರಶ್ಮಿ ಸಿ. ಮೋಹನ್ ಸ್ವಾಗತಿಸಿದರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪಿ, ಎಲ್.ವಿ.ಎನ್. ಪವಿತ್ರಾ ವಂದಿಸಿದರು.





