ಮಾಸ್ಕೊ: ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆಯು ಗಮನಾರ್ಹವಾಗಿ ಕಡಿಮೆಯಾಗಿದೆ. ಹೀಗಾಗಿ ರಷ್ಯಾ, ಭಾರತ ಹಾಗೂ ಚೀನಾಗಳ (ಆರ್‌ಐಸಿ) ಸ್ಥಗಿತಗೊಡಿರುವ ಮಾತುಕತೆಯನ್ನು ಪುನರಾರಂಭಿಸಬಹುದು ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್ ಸೋಮವಾರ ಹೇಳಿದ್ದಾರೆ.
ಇಲ್ಲಿ 'ಫೋರಂ ಆಫ್ ದಿ ಫ್ಯೂಚರ್-2050' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಆರ್‌ಐಸಿಗಳ ಜಂಟಿ ಕೆಲಸವು ಮರುಸ್ಥಾಪನೆಗೊಂಡರೆ, ಅದು ಯುರೇಷಿಯನ್‌ನ (ಯುರೋಪ್ ಮತ್ತು ಏಷ್ಯಾ) ಸಂಬಂಧದ ಮೊದಲ ಹೆಜ್ಜೆಯಾಗಲಿದೆ' ಎಂದರು.
'ಕೆಲವು ವರ್ಷಗಳಿಂದ ನಾವು ವಿದೇಶಾಂಗ ಸಚಿವರ ಮಟ್ಟದಲ್ಲಿ ಸಭೆ ಸೇರಿಲ್ಲ. ಈ ಸಮಸ್ಯೆ ಬಗ್ಗೆ ಚೀನಾದ ಸಹೊದ್ಯೋಗಿ ಹಾಗೂ ಭಾರತದ ವಿದೇಶಾಂಗ ಸಚಿವಾಲಯದ ಮುಖ್ಯಸ್ಥರೊಂದಿಗೆ ಚರ್ಚಿಸುತ್ತಿದ್ದೇವೆ. ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನತೆ ಕಡಿಮೆಯಾಗಿದೆ ಮತ್ತು ಪರಿಸ್ಥಿತಿ ಸ್ಥಿರವಾಗಿದೆ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಮೂರು ದೇಶಗಳು ಮಾತುಕತೆ ಪುನರಾರಂಭಿಸಬಹುದು' ಎಂದರು.




