ಕುಂಬಳೆ: ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯ ಅನಂತಪುರ-ಕಣ್ಣೂರು ರಸ್ತೆಯ ಸಿದ್ದಿಬೈಲು ಎಂಬಲ್ಲಿ ಉಪಯೋಗಶೂನ್ಯ ಕ್ವಾರೆಯಲ್ಲಿ ತುಂಬಿಸಲಾದ ಮರದ ತೊಗಟೆಗಳು ಮಳೆಗೆ ಕೊಳೆತು ಪರಿಸರ ಪ್ರದೇಶ ದುರ್ಗಂಧಮಯವಾಗಿದ್ದು, ಜೊತೆಗೆ ಪರಿಸರ ಪ್ರದೇಶದ ಅನೇಕ ಮನೆಗಳ ಕುಡಿಯುವ ನೀರಿನ ಬಾವಿಗಳು ಬಣ್ಣಗೆಟ್ಟು ತೀವ್ರ ವಾಸನೆಯಿಂದೊಡಗೂಡಿ ಉಪಯೋಗ್ಯ ಶೂನ್ಯವಾಗಿರುವ ಬಗ್ಗೆ ದೂರಲಾಗಿದೆ.
ಸೀತಾಂಗೋಳಿ ಕುಂಬಳೆ ರಸ್ತೆಯ ಪೆರ್ಣೆ-ಅನಂತಪುರ-ಕಣ್ಣೂರು ರಸ್ತೆಯ ಸಿದ್ದಿಬೈಲು ಹತ್ತಾರು ಕುಟುಂಬಗಳು ವಾಸಿಸುವ ಪುಟ್ಟ ಹಳ್ಳಿ. ಇಲ್ಲಿ ಉಪಯೋಗಶೂನ್ಯವಾದ ಕೆಂಗಲ್ಲು ಕ್ವಾರೆಗೆ ಅವ್ಯಾಹತವಾಗಿ ಬೃಹತ್ ಮರದ ದಿಮ್ಮಿಗಳನ್ನು ತಂದು ಹದಗೊಳಿಸಲಾಗುತ್ತಿದ್ದು, ಮರ ಹದಗೊಳಿಸುವಾಗ ಲಭಿಸುವ ತೊಗಟೆಯಾದಿ ಮಾಲಿನ್ಯಗಳನ್ನು ಅದೇ ಕ್ವಾರೆಯಲ್ಲಿ ಗುಡ್ಡೆ ಹಾಕಲಾಗಿದ್ದು, ಇದೀಗ ಜನರಿಗೆ ಸಮಸ್ಯೆಯಾಗಿ ಕಾಡಲಾರಂಭಿಸಿದೆ. ಇತ್ತೀಚೆಗೆ ಸರಿದ ಭಾರೀ ಮಳೆಗೆ ಈ ತೊಗಡೆಗಳೆಲ್ಲ ಕೊಳೆತು ಉಸಿರಾಡಲು ಸಮಸ್ಯೆಯಾಗುವಂತೆ ದುರ್ಗಂಧ ಬೀರತೊಡಗಿದೆ. ಪರಿಸರದ ಸುಮಾರು ಒಂದೂವರೆ ಕಿಲೋಮೀಟರ್ ದೂರಗಳವರೆಗೂ ಕಟು ದುರ್ಗಂಧ ವ್ಯಾಪಿಸಿ ಪರಿಸರದ ಜನರು ಊರು ಬಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಕೊಳೆತ ತೊಗಟೆಗಳ ದ್ರಾವಕ ಮಣ್ಣಿನಲ್ಲಿ ಸೇರಿ ಪರಿಸರದ ಅಂತರ್ಜಲವನ್ನು ಕಲುಷಿತಗೊಳಿಸಿದೆ. ಮಣ್ಣಿನ ಸಂದುಗಳ ಮೂಲಕ ಮಲಿನ ಮರದ ಜಲ ವ್ಯಾಪಿಸಿ ಹತ್ತಿದ ಹಲವು ಕುಟುಂಬಗಳ ಬಾವಿಗೆ ಸೇರ್ಪಡೆಗೊಂಡಿದ್ದು, ಬಣ್ಣಗೆಟ್ಟಿರುವ ನೀರು ದುರ್ವಾಸನೆಯೊಂದಿಗೆ ಬಳಸಲು ಅಯೋಗ್ಯವಾಗಿರುವುದಾಗಿ ಸ್ಥಳೀಯರು ಅವಲತ್ತುಕೊಂಡಿದ್ದಾರೆ.
ಬಿರುಸಿನ ಮರದ ವ್ಯಾಪಾರ:
ಇತ್ತೀಚೆಗಿನ ತಿಂಗಳುಗಳಲ್ಲಿ ಜಿಲ್ಲೆಯಾದ್ಯಂತ ವ್ಯಾಪಕ ಪ್ರಮಾಣದ ಮರದ ವ್ಯವಹಾರ ಬಲಗೊಂಡಂತಿದೆ. ವ್ಯಾಪಕವಾಗಿ ಹರಡಿರುವ ಕಾಡುಗಳನ್ನು ಗುತ್ತಿಗೆಗೆ ಪಡೆದು ಅವ್ಯಾಹತವಾಗಿ ಮರ ಕಡಿದು ಮಾರಾಟಮಾಡುವ ಜಾಲ ಕಾರ್ಯನಿರತವಾಗಿರುವುದು ರಸ್ತೆಗಳುದ್ದಕ್ಕೂ ಹಗಲಿರುಳೆನ್ನದೆ ಸಂಚರಿಸುವ ಮರದ ಧಿಮ್ಮಿಗಳನ್ನು ಹೇರಿ ಸಾಗುವ ಲಾರಿಗಳಿಂದ ಬಹಿರಂಗಗೊಳ್ಳುತ್ತಿದೆ.
ಸೀತಾಂಗೋಳಿಯ ಕಿನ್ಪ್ರಾ ಕೈಗಾರಿಕ ಪ್ರಾಂಗಣದ ಸಹಿತ ಸೀತಾಂಗೋಳಿ, ಸೂರಂಬೈಲುಗಳಲ್ಲಿ ಅನೇಕ ಮರದ ಮಿಲ್ಲುಗಳು ಕಾರ್ಯಾಚರಿಸುತ್ತಿದ್ದು, ಈ ಪೈಕಿ ಕಾಗದಗಳ ಉತ್ಪಾದನೆಗೆ ತೊಡಗಿರುವ ಕೆಲವು ಮಿಲ್ಲುಗಳು ಮರದ ಮಾಲಿನ್ಯಗಳನ್ನು ಸಮರ್ಪಕವಾಗಿ ವಿಲೇವಾರಿಗೊಳಿಸದೆ ಕ್ವಾರೆ ಸಹಿತ ವಿವಿಧೆಡೆ ಅವೈಜ್ಞಾನಿಕ ರೀತಿಯಲ್ಲಿ ಎಸೆಯುತ್ತಿರುವುದು ಸಮಸ್ಯಾತ್ಮಕವಾಗಿ ಕಂಡುಬಂದಿದೆ. ಸ್ಥಳೀಯ ಮರಗಳ ಜೊತೆಗೆ ವಿದೇಶದಿಂದ ಆಮದು ಮಾಡಿಕೊಳ್ಳುವ ವಿನಾಶಕಾರಿ ಮರಗಳು ವ್ಯಾಪಕ ಪರಿಸರ ಹಾನಿಗಳನ್ನು ಉಂಟುಮಾಡುತ್ತಿರುವುದು ಮಾನವ ಸಹಿತ ಜೀವಜಾಲಗಳ ಅವನತಿಗೆ ಕಾರಣವಾಗುವ ಭೀತಿ ಕಂಡುಬಂದಿದೆ.
ಸಿದ್ದಿಬೈಲು ಪ್ರದೇಶದ ಸಮಾಜ ಘಾತುಕ ಇಂತಹ ಉಪಕ್ರಮಗಳಿಂದ ಸಂಬಂಧಪಟ್ಟವರು ಇನ್ನಾದರೂ ಹಿಂದೆ ಸರಿಯಬೇಕು. ಎಲ್ಲರಿಗೂ ಜೀವಿಸುವ ಹಕ್ಕಿದೆ ಎಂಬುದನ್ನು ಅರ್ಥೈಸಿ ಜೀವಜಾಲಗಳಿಗೆ ಹಾನಿಯಾಗದಂತೆ ವ್ಯವಹಾರ ನಡೆಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಅಭಿಮತ:
ಸಿದ್ದಿಬೈಲು ಪ್ರದೇಶದಲ್ಲಿ ಮರದ ಮಾಲಿನ್ಯ ಸಮಸ್ಯೆ ಗಮನಕ್ಕೆ ಬಂದಿದ್ದು, ಪುತ್ತಿಗೆ ಗ್ರಾ.ಪಂ. ಕಾರ್ಯದರ್ಶಿ ಸಹಿತ ಸಂಬಂಧಪಟ್ಟವರು ಈಗಾಗಲೇ ಆ ಪ್ರದೇಶ ಸಂದರ್ಶಿಸಿ ಅವಲೋಕನ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪರವಾನಿಗೆ ರಹಿತ ಉದ್ಯಮಿಗಳು ನಡೆಸುವುದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಾಗರಿಕರ ಹಿತ ರಕ್ಷಣೆಯ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ನೆಮ್ಮದಿಯಿಂದ ಬದುಕುವ ಹಕ್ಕನ್ನು ಸಂರಕ್ಷಿಸಲಾಗುವುದು.
-ಅನಿತಾ.
ಸದಸ್ಯೆ.ಪುತ್ತಿಗೆ ಗ್ರಾಮ ಪಂಚಾಯತಿ.

.jpg)
.jpg)
.jpg)

