HEALTH TIPS

ಭಾರತ ಯಾರ ಮಧ್ಯಸ್ಥಿಕೆಯನ್ನೂ ಒಪ್ಪುವುದಿಲ್ಲ: ಟ್ರಂಪ್‌ಗೆ ತಿವಿದ ಮೋದಿ

ನವದೆಹಲಿ: 'ಕಳೆದ ತಿಂಗಳು ಭಾರತ ಹಾಗೂ ಪಾಕಿಸ್ತಾನ‌ ಸೇನೆಗಳ ನಡುವೆ ನೇರ ಮಾತುಕತೆ ನಡೆಸಿದ ನಂತರವೇ ಸೇನಾ ಸಂಘರ್ಷಕ್ಕೆ ವಿರಾಮ ಘೋಷಿಸಲಾಗಿತ್ತು. ಈ ವಿಚಾರದಲ್ಲಿ ಅಮೆರಿಕದ ಮಧ್ಯಸ್ಥಿಕೆ ಇರಲಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಈ ಮೂಲಕ ಮೋದಿ ಅವರು, 'ಭಾರತ ಮತ್ತು ಪಾಕಿಸ್ತಾನ ನಡುವೆ ನಾನು ಮಧ್ಯಸ್ಥಿಕೆ ವಹಿಸಿ, ಉಭಯ ದೇಶಗಳ ನಡುವಿನ ಸಂಘರ್ಷ ಶಮನ ಮಾಡಿದೆ' ಎಂಬ ಟ್ರಂಪ್‌ ಅವರ 'ಸಂಕಥನ'ವನ್ನು ಸಾರಾಸಗಟಾಗಿ ಅಲ್ಲಗಳೆದಿದ್ದಾರೆ.

ಟ್ರಂಪ್‌ ಅವರೊಂದಿಗೆ ಬುಧವಾರ ದೂರವಾಣಿ ಮೂಲಕ 35 ನಿಮಿಷ ಮಾತನಾಡಿದ ಮೋದಿ ಈ ಮಾತುಗಳನ್ನು ದೃಢವಾಗಿ ಹೇಳಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಹೇಳಿದ್ದಾರೆ.

'ಭಾರತವು ಎಂದಿಗೂ ಮಧ್ಯಸ್ಥಿಕೆಯನ್ನು ಒಪ್ಪಿಕೊಂಡಿಲ್ಲ, ಒಪ್ಪಿಕೊಳ್ಳುವುದೂ ಇಲ್ಲ. ಪಾಕಿಸ್ತಾನದ ಮನವಿ ಮೇರೆಗೆ ಸಂಘರ್ಷ ಶಮನ ಕುರಿತಂತೆ ಉಭಯ ದೇಶಗಳ ಮಿಲಿಟರಿ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯಿತು ಎಂಬುದಾಗಿ ಮೋದಿ ಹೇಳಿದ್ದಾರೆ' ಎಂದು ಮಿಸ್ರಿ ತಿಳಿಸಿದ್ದಾರೆ.

'ಭಯೋತ್ಪಾದನೆಯನ್ನು ಭಾರತ ಯುದ್ಧವೆಂದೇ ಪರಿಗಣಿಸುತ್ತದೆ. ಅಲ್ಲದೇ, ಆಪರೇಷನ್‌ ಸಿಂಧೂರ ಇನ್ನೂ ಮುಂದುವರಿದಿರುವುದಾಗಿ ಮೋದಿ ಹೇಳಿದ್ದಾರೆ' ಎಂದೂ ಅವರು ವಿವರಿಸಿದ್ದಾರೆ.

ಮೋದಿ ಅವರೊಂದಿಗೆ ದೂರವಾಣಿ ಸಂವಾದ ನಡೆಸಿದ ಕೆಲವೇ ಗಂಟೆಗಳಲ್ಲಿ ಟ್ರಂಪ್‌, 'ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ನಾನೇ ನಿಲ್ಲಿಸಿದೆ' ಎಂದು ಪುನರುಚ್ಚರಿಸಿದ್ದಾರೆ. ಅವರು ಹೀಗೆ ಹೇಳುತ್ತಿರುವುದು ಇದು ಹತ್ತನೇ ಬಾರಿಯಾಗಿದೆ.

'ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ. ಮೋದಿ ಒಬ್ಬ ಅದ್ಭುತ ವ್ಯಕ್ತಿ. ಕಳೆದ ರಾತ್ರಿ ನಾನು ಮೋದಿಯೊಂದಿಗೆ ಮಾತನಾಡಿದ್ದೇನೆ. ಅಮೆರಿಕ ಮತ್ತು ಭಾರತ ಶೀಘ್ರವೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿವೆ. ಎರಡೂ ದೇಶಗಳ ನಡುವಿನ ಸಂಘರ್ಷ ನಿಲ್ಲಿಸಿದ್ದು ನಾನೇ' ಎಂದು ಹೇಳಿದ್ದಾರೆ.

ಪಹಲ್ಗಾಮ್‌ನಲ್ಲಿನ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಭಾರತ 'ಆಪರೇಷನ್‌ ಸಿಂಧೂರ' ಆರಂಭಿಸಿದ ಸಂದರ್ಭದಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಕುರಿತು ಟ್ರಂಪ್‌ ಅವರು ಮೇ 10ರಂದು ಮೊದಲು ಘೋಷಿಸಿದ್ದರು.

'ಕದನ ವಿರಾಮಕ್ಕೆ ಒಪ್ಪಿಕೊಳ್ಳದಿದ್ದಲ್ಲಿ ಎರಡೂ ದೇಶಗಳೊಂದಿಗೆ ವ್ಯಾಪಾರ ನಿಲ್ಲಿಸುವುದಾಗಿ ಬೆದರಿಕೆ ಒಡ್ಡಿದ್ದೆ. ಈ ಮೂಲಕ ಉಭಯ ದೇಶಗಳ ನಡುವೆ ಕದನ ವಿರಾಮಕ್ಕೆ ನಾನು ಮಧ್ಯಸ್ಥಿಕೆ ವಹಿಸಿದ್ದೆ' ಎಂದು ಟ್ರಂಪ್‌ ಆಗಿನಿಂದ ಹೇಳುತ್ತಲೇ ಇದ್ದಾರೆ.

'ಕದನ ವಿರಾಮಕ್ಕೆ ಸಂಬಂಧಿಸಿ ಘಟನಾವಳಿಗಳಲ್ಲಿ ಯಾವುದೇ ಮಟ್ಟದಲ್ಲಿ, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಅಥವಾ ಭಾರತ-ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ಕುರಿತಂತೆ ಚರ್ಚೆ ನಡೆದಿಲ್ಲ ಎಂಬುದನ್ನು ಟ್ರಂಪ್‌ ಅವರಿಗೆ ಮೋದಿ ಸ್ಪಷ್ಟವಾಗಿ ಮನವರಿಕೆ ಮಾಡಿದ್ದಾರೆ' ಎಂದು ಮಿಸ್ರಿ ಹೇಳಿದ್ದಾರೆ.

'ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ನಂತರ, ಭಾರತವು ಭಯೋತ್ಪಾದನೆ ವಿರುದ್ಧ ದೃಢವಾದ ಕ್ರಮ ತೆಗೆದುಕೊಳ್ಳಲಿದೆ ಎಂಬುದನ್ನು ಜಗತ್ತಿಗೇ ಸಾರಿ ಹೇಳಿದೆ. ಪಾಕಿಸ್ತಾನದಿಂದ ನಡೆಯುವ ಯಾವುದೇ ಆಕ್ರಮಣಕಾರಿ ಕೃತ್ಯಕ್ಕೆ ಭಾರತವು ಪ್ರಬಲವಾದ ಪ್ರತ್ಯುತ್ತರ ನೀಡಲಿದೆ ಎಂಬುದನ್ನು ಸಹ ಮೋದಿ ಸ್ಪಷ್ಟಪಡಿಸಿದ್ದಾರೆ' ಎಂದು ಮಿಸ್ರಿ ತಿಳಿಸಿದ್ದಾರೆ.

ತಾನು ಎದುರಿಸುವ ಸಮಸ್ಯೆಗಳ ಕುರಿತು ಭಾರತ ಯಾರ ಮಧ್ಯಸ್ಥಿಕೆಯನ್ನೂ ಒಪ್ಪುವುದಿಲ್ಲ. ಈ ಬಗ್ಗೆ ನಮ್ಮಲ್ಲಿ ಸಂಪೂರ್ಣ ರಾಜಕೀಯ ಒಮ್ಮತ ಇದೆ

-ನರೇಂದ್ರ ಮೋದಿ ಪ್ರಧಾನಿ

---

'ಮುನೀರ್‌-ಟ್ರಂಪ್‌ ಭೋಜನ: ದೊಡ್ಡ ಹಿನ್ನಡೆ'

ಪ್ರಧಾನಿ ಮೋದಿ ಅವರು ವಿದೇಶ ಪ್ರವಾಸದಿಂದ ಹಿಂದಿರುಗಿದ ಕೂಡಲೇ ಸರ್ವ ಪಕ್ಷಗಳ ಸಭೆ ಕರೆಯಬೇಕು ಎಂದು ಕಾಂಗ್ರೆಸ್‌ ಬುಧವಾರ ಒತ್ತಾಯಿಸಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಮ್‌ ಮುನೀರ್‌ ಅವರೊಂದಿಗೆ ಟ್ರಂಪ್‌ ಅವರ ಭೋಜನಕೂಟ ಏರ್ಪಡಿಸಿರುವುದು 'ದೊಡ್ಡ ಹಿನ್ನಡೆ' ಎಂದು ಕಾಂಗ್ರೆಸ್‌ ಟೀಕಿಸಿದೆ. ಈ ಬಗ್ಗೆ ದೂರವಾಣಿ ಸಂಭಾಷಣೆ ಸಂದರ್ಭದಲ್ಲೇ ಭಾರತದ ಅಸಮಾಧಾನವನ್ನು ಅಮೆರಿಕದ ಅಧ್ಯಕ್ಷರಿಗೆ ತಿಳಿಸಬೇಕಿತ್ತು ಎಂದು ಆಗ್ರಹಿಸಿದೆ. 'ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ವ್ಯಾಪಾರ ಒಪ್ಪಂದವನ್ನು ಸಾಧನವಾಗಿ ಬಳಸಿಕೊಳ್ಳುವ ಟ್ರಂಪ್‌ ಅವರ ನಡೆಯನ್ನು ಮೋದಿ ಅವರು ಸಂಸತ್ತಿನಲ್ಲಿ ಖಂಡಿಸಬೇಕು' ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಆಗ್ರಹಿಸಿದ್ದಾರೆ. 'ಪಾಕಿಸ್ತಾನ ಫೀಲ್ಡ್‌ ಮಾರ್ಷಲ್‌ ಮುನೀರ್‌ ಅವರ ಪ್ರಚೋದನಕಾರಿ ಹಾಗೂ ಸ್ವೀಕಾರಾರ್ಹವಲ್ಲದ ಹೇಳಿಕೆಗಳಿಂದಾಗಿ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದಿದೆ. ಸರ್ಕಾರದ ಮುಖ್ಯಸ್ಥನಲ್ಲದ ಸೇನಾ ಪಡೆಯ ವ್ಯಕ್ತಿಯನ್ನು ಟ್ರಂಪ್‌ ಊಟಕ್ಕೆ ಆಹ್ವಾನಿಸಿದ್ದಾರೆ. ಇದು ಭಾರತಕ್ಕೆ ದೊಡ್ಡ ಹಿನ್ನಡೆ' ಎಂದಿದ್ದಾರೆ. 'ಕಾಂಗ್ರೆಸ್‌ನ ಸುಳ್ಳಿನ ಮುಖವಾಡ ಕಳಚಿದೆ' 'ಆಪರೇಷನ್‌ ಸಿಂಧೂರ ಕುರಿತು ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ನಡೆದ ಸಂಭಾಷಣೆಯು ಕಾಂಗ್ರೆಸ್‌ನ ಸುಳ್ಳುಗಳ ಮುಖವಾಡವನ್ನು ಕಳಚಿದೆ' ಎಂದು ಬಿಜೆಪಿ ಬುಧವಾರ ಟೀಕಿಸಿದೆ. 'ಇದನ್ನು ನಂಬದಿದ್ದರೆಕಾಂಗ್ರೆಸ್‌ ಪಕ್ಷವು 'ಪಾಕಿಸ್ತಾನದ ಪಾಲುದಾರ' ಎಂದೇ ಪರಿಗಣಿಸಬೇಕಾಗುತ್ತದೆ' ಎಂದು ಹೇಳಿದೆ. 'ಭಾರತಕ್ಕೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಅಗತ್ಯವಿಲ್ಲ ಹಾಗೂ ಅದನ್ನು ಒಪ್ಪುವುದಿಲ್ಲ ಎಂದು ಮೋದಿ ಅವರು ಟ್ರಂಪ್‌ ಅವರಿಗೆ ನೇರವಾಗಿ ಹೇಳಿರುವುದನ್ನು ಕಾಂಗ್ರೆಸ್‌ ಹಾಗೂ ಅದರ ಟ್ರೋಲ್‌ ಪಡೆಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದು ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಹೇಳಿದ್ದಾರೆ.

ಉಭಯ ನಾಯಕರ ಭೇಟಿಗೆ ಸಮ್ಮತಿ

'ಕೆನಡಾದಿಂದ ಹಿಂದಿರುಗುವಾಗ ಅಮೆರಿಕಕ್ಕೆ ಭೇಟಿ ನೀಡುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಮನವಿ ಮಾಡಿದರು. ಆದರೆ ಪೂರ್ವ ನಿಗದಿತ ಕಾರ್ಯಕ್ರಮ ಇರುವುದರಿಂದ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಮೋದಿ ತಿಳಿಸಿದರು. ಮುಂದಿನ ದಿನಗಳಲ್ಲಿ ಉಭಯ ನಾಯಕರು ಭೇಟಿಯಾಗಲು ಸಮ್ಮತಿಸಿದ್ದಾರೆ' ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಹೇಳಿದ್ದಾರೆ. ಇಸ್ರೇಲ್‌ ಹಾಗೂ ಇರಾನ್‌ ನಡುವೆ ನಡೆಯುತ್ತಿರುವ ಸಂಘರ್ಷದ ಕುರಿತೂ ಉಭಯ ನಾಯಕರು ಚರ್ಚಿಸಿದರು. ರಷ್ಯಾ ಹಾಗೂ ಉಕ್ರೇನ್‌ ಸಂಘರ್ಷ ಹಿಂದೂ ಮಹಾಸಾಗರ-ಪೆಸಿಫಿಕ್‌ ಪ್ರದೇಶ ಕುರಿತಂತೆಯೂ ಮಾತುಕತೆ ನಡೆಸಿದರು. ಕ್ವಾಡ್‌ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸುವಂತೆ ಟ್ರಂಪ್‌ ಅವರಿಗೆ ಮೋದಿ ಆಹ್ವಾನ ನೀಡಿದರು. ಇದಕ್ಕೆ ಸಮ್ಮತಿಸಿದ ಟ್ರಂಪ್‌ 'ಭಾರತದ ಭೇಟಿಯನ್ನು ಎದುರು ನೋಡುತ್ತಿದ್ದೇನೆ' ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries