ನವದೆಹಲಿ: ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ ಒಂಟಿ ತಾಯಂದಿರ ಮಕ್ಕಳಿಗೆ, ಅವರ ತಾಯಿಯ ಒಬಿಸಿ ಪ್ರಮಾಣ ಪತ್ರ ಆಧರಿಸಿ ಜಾತಿ ಪ್ರಮಾಣ ಪತ್ರ ನೀಡಲು ನಿಯಮಗಳಲ್ಲಿ ತಿದ್ದುಪಡಿ ತರಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆ ಮಹತ್ವದ್ದಾಗಿದೆ, ಅದನ್ನು ವಿಸ್ತೃತ ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಎನ್. ಕೋಟೇಶ್ವರ ಸಿಂಗ್ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿತು.
ದೆಹಲಿ ಮೂಲದ ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿಯ ಕುರಿತು ಕೇಂದ್ರ ಮತ್ತು ದೆಹಲಿ ಸರ್ಕಾರ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಪೀಠ ಜನವರಿ 31ರಂದು ನಿರ್ದೇಶಿಸಿತ್ತು. ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಿರುವುದಾಗಿ ಕೇಂದ್ರವನ್ನು ಪ್ರತಿನಿಧಿಸುವ ವಕೀಲರು ತಿಳಿಸಿದರು. ಅಲ್ಲದೆ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯಬೇಕಿದ್ದು, ಎಲ್ಲ ರಾಜ್ಯಗಳನ್ನು ಈ ವಿಷಯದಲ್ಲಿ ಪ್ರತಿವಾದಿಗಳನ್ನಾಗಿ ಮಾಡಬೇಕು ಎಂದು ಅವರು ಕೋರಿದರು.
ಈ ಕುರಿತು ಜುಲೈ 22ರಂದು ವಿಚಾರಣೆ ನಡೆಸಲಾಗುವುದು ಎಂದ ಪೀಠವು, ಪ್ರತಿವಾದಿಗಳಿಗೆ ತಮ್ಮ ಲಿಖಿತ ಹೇಳಿಕೆಗಳನ್ನು ಸಲ್ಲಿಸುವಂತೆ ಸೂಚಿಸಿತು. ಅಲ್ಲದೆ 'ಒಂಟಿ ತಾಯಿ'ಯ ಅಂತರ್ಜಾತಿ ವಿವಾಹದಲ್ಲಿದ್ದ ಸನ್ನಿವೇಶವನ್ನೂ ಪರಿಶೀಲಿಸುವಂತೆ ತಿಳಿಸಿತು.
ದೆಹಲಿ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, 'ಒಂಟಿ ತಾಯಿ'ಯ ಒಬಿಸಿ ಪ್ರಮಾಣ ಪತ್ರ ಆಧರಿಸಿ ಅವರ ಮಕ್ಕಳಿಗೆ ಒಬಿಸಿ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ. ಬದಲಿಗೆ ಮಗು ತಮ್ಮ ತಂದೆ ಅಥವಾ ತಂದೆಯ ರಕ್ತ ಸಂಬಂಧಿಗಳ ಒಬಿಸಿ ಪ್ರಮಾಣ ಪತ್ರವನ್ನು ಆಧರಿಸಿ, ಅಂಥಹ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಇದು ಸಂವಿಧಾನದ ನಿಬಂಧನೆಗಳಿಗೆ ವಿರುದ್ಧವಾಗಿದೆ ಮತ್ತು ಒಬಿಸಿ ಮಕ್ಕಳ ಹಕ್ಕುಗಳ ಉಲ್ಲಂಘನೆಯೂ ಆಗಿದೆ ಎಂದು ಅರ್ಜಿದಾರರು ಮನವಿಯಲ್ಲಿ ಪ್ರತಿಪಾದಿಸಿದ್ದಾರೆ.
ಒಬಿಸಿ ಪ್ರವರ್ಗಕ್ಕೆ ಸೇರಿದ ಒಂಟಿ ತಾಯಿಯು ದತ್ತು ಮಗುವಿಗೆ ತನ್ನ ಒಬಿಸಿ ಪ್ರಮಾಣ ಪತ್ರ ಪಡೆಯಲು ಅನುಕೂಲ ಕಲ್ಪಿಸಿಕೊಡುವಂತೆಯೂ ಅರ್ಜಿದಾರರು ಕೋರಿದ್ದಾರೆ.




