ಕಾಸರಗೋಡು: ಭಾವಕೇಂದ್ರಿತ ವೈಚಾರಿಕತೆ ಚುಟುಕು ಸಾಹಿತ್ಯದಲ್ಲಿ ಅಡಕವಾಗಿದ್ದು, ಉತ್ತಮ ಚುಟಕು ರಚಿಸಲು ಮಾಗಿದ ಅನುಭವ ಅಗತ್ಯ ಎಂಬುದಾಗಿ ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ತಿಳಿಸಿದ್ದಾರೆ.
ಅವರು ಕಾಸರರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕøತಿಕ ಭವನದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್(ಕಚುಸಾಪ)ನ 5ನೇ ಅಂತಾರಾಜ್ಯ ಚುಟುಕು ಸಾಹಿತ್ಯ ಸಮ್ಮೇಳನ'ಚುಟುಕು ಸಾಹಿತ್ಯ ಸಿರಿ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚುಟುಕು ಸಾಹಿತ್ಯದ ಬಗ್ಗೆ ಎಂದಿಗೂ ತಿರಸ್ಕಾರದ ಭಾವನೆ ಸಲ್ಲದು. ಚುಟುಕು ಸಾಹಿತ್ಯ ಸಾಂದ್ರವಾಗಿ ಭಾವನೆ ಅಭಿವ್ಯಕ್ತಗೊಳಿಸುವ ಪ್ರಾಕಾರವಾಗಿದ್ದು, ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಕಟ್ಟುವ ಹಾಗೂ ಬೆಳೆಸುವ ಮನೋಭೂಮಿಕೆಯಲ್ಲಿ ಇಂತಹ ಸಮ್ಮೇಳನಗಳು ಮಹತ್ವದ್ದಾಗಿದೆ ಎಂದು ತಿಳಿಸಿದರು.
ನಾಡಿನ ಹಿರಿಯ ಚಿಂತಕ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಸಮ್ಮೇಳನ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಚುಟುಕುಗಳು ವಾಮನ ರೂಪಿಯಾಗಿದ್ದರೂ, ಇದರ ಪರಿಣಾಮ ತ್ರಿವಿಕ್ರಮನಂತೆ ಹಿರಿದಾಗಿದೆ. ಚುಟುಕಿನ ಗುಟುಕಿನಲ್ಲಿ ಬ್ರಹ್ಮಾಂಡ ಅಡಗಿದೆ. ಕನ್ನಡ ಸಾಹಿತ್ಯ, ಮಹಾನ್ ಸಮುದ್ರವಾಗಿದ್ದು, ಚುಟುಕು ಸಾಹಿತ್ಯಗಳಿಂದ ಮತ್ತಷ್ಟು ಸಂಪನ್ನಗೊಂಡಿದೆ. ಕಾಸರಗೋಡಿನಲ್ಲಿ ಕನ್ನಡ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಭಾಷೆಯ ಪೋಷಣೆ ಅಗತ್ಯ:
ಒಂದು ಭಾಷೆ ನಿರ್ನಾಮಗೊಂಡಲ್ಲಿ ಒಂದು ಸಂಸ್ಕøತಿ ನಾಶಗೊಳ್ಳಲು ಸಾಧ್ಯ. ಗಡಿನಾಡು ಕಾಸರಗೋಡಿನ ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಮಲಯಾಳ ಶಿಕ್ಷಕರ ನೇಮಕಾತಿಯಿಂದ ಕನ್ನಡ ಭಾಷೆಗೆ ಹೆಚ್ಚಿನ ಧಕ್ಕೆಯುಂಟಾಗುವ ಸಾಧ್ಯತೆಯಿದ್ದು, ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾಗಿದೆ. ಕಾಸರಗೋಡಿನಲ್ಲಿ ಕನ್ನಡ ಭಾಷೆಯನ್ನು ಕ್ರಮೇಣ ಚಿವುಟಿಹಾಕುವ ಹುನ್ನಾರ ಸರ್ಕಾರದ ಕಡೆಯಿಂದ ನಡೆಯುತ್ತಿದ್ದು, ಇದರ ವಿರುದ್ಧ ಪ್ರಬಲ ಹೋರಾಟದ ಅನಿವಾರ್ಯತೆಯಿದೆ. ಮಂಜೇಶ್ವರ ಗೋವಿಂದ ಪೈ, ನಾಡೋಜ ಕಯ್ಯಾರ ಕಿಞಣ್ಣ ರೈ ಮೊದಲಾದ ಕಾಸರಗೋಡಿನ ಮೇರು ಸಾಹಿತಿಗಳಿಂದ ಇಲ್ಲಿನ ಸಾಹಿತ್ಯ ಉನ್ನತಿಗೇರಲು ಸಾಧ್ಯವಾಗಿದೆ ಎಂದು ವಿ.ಬಿ ಕುಳಮರ್ವ ತಿಳಿಸಿದರು.
ಈ ಸಂದರ್ಭ ಹೊರತರಲಾದ ಚುಟುಕು ಸಾಹಿತ್ಯ ಪುಸ್ತಕವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರತಿಷ್ಠಾನ ಅಧ್ಯಕ್ಷ ರಾಮಕೃಷ್ಣ ಮಯ್ಯ ಬಿಡುಗಡೆಗೊಳಿಸಿದರು. ಸಮ್ಮೇಳನ ಸರ್ವಾಧ್ಯಕ್ಷ ವಿ,ಬಿ ಕುಳಮರ್ವ ಅವರಿಗೆ 'ಚುಟುಕು ಚಿನ್ಮಯ'ಪ್ರಶಸ್ತಿ ನೀಡಿ ಗೌರವಿಸಲಾಯಿತು. ಏಕಪಾತ್ರಾಭಿನಯ ನಡೆಸಿಕೊಟ್ಟ ಹುಬ್ಬಳ್ಳಿಯ ಬಾಲ ಪ್ರತಿಭೆ ಅವನೀಶ ನೀಲಗುಂದ ಅವರನ್ನು ಸನ್ಮಾನಿಸಲಾಯಿತು.
ಉಡುಪಿಯ ಜ್ಯೋತಿಷ್ಯ ಪಂಡಿತ ವಿದ್ವಾನ್ ರಘುಪತಿ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಚುಸಾಪ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಚುಟುಕು ಸಾಹಿತ್ಯ ಪರಿಷತ್ ಕಾಸರಗೋಡು ಜಿಲ್ಲಾಧ್ಯಕ್ಷ ವೆಂಕಟ ಭಟ್ ಎಡನೀರು, ಡಾ. ವಾಣಿಶ್ರೀ ಕಾಸರಗೋಡು ಉಪಸ್ಥಿತರಿದ್ದರು.
ಜಯಲಕ್ಷ್ಮೀ ಅರುಗೋಳ್ ಸ್ವಾಗತಿಸಿದರು. ಡಾ. ಗಂಗಯ್ಯ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ರೇಖಾ ಸುಧೇಶ್ ಮಂಗಳೂರು ವಂದಿಸಿದರು.
ಶಿರಸಿಯ ಯಕ್ಷಗಾನ ತಜ್ಞ ಗಣಪತಿ ಭಟ್ಟ ವರ್ಗಾಸರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ, ಸಮಾರೋಪ, ಡಾ. ಸುರೇಶ ನೆಗಲಗುಳಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ನಾಡಿನ ಕವಿಗಳಿಂದ ಕವನ ವಾಚನ, ಕಾಸರಗೋಡು ಗಡಿನಾಡ ಸಾಂಸ್ಕೃತಿಕ ಸಂಘಟನೆಯ ಡಾ.ವಾಣಿಶ್ರೀ ಹಾಗೂ ತಂಡದಿಂದ ನೃತ್ಯ ಸಂಗೀತ ವೈಭವ, ವಾದಿರಾಜ ಕಲ್ಲೂರಾಯ ಅವರ ನೇತೃತ್ವದಲ್ಲಿ ಹರಿಸರ್ವೋತ್ತಮ ಯಕ್ಷ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಟಾನ(ರಿ) ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.





