ಬೆಂಗಳೂರು : ಕನ್ನಡವು ತಮಿಳಿನಿಂದ ಹುಟ್ಟಿರುವ ಭಾಷೆ ಎಂದು ಹೇಳಿಕೆ ನೀಡಿರುವ ಚಿತ್ರನಟ ಕಮಲ್ ಹಾಸನ್ ವಿರುದ್ಧ ಕರ್ನಾಟಕದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿವೆ. ಇದರ ಮಧ್ಯೆ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಹೊಸದೊಂದು ವಾದ ಮಂಡಿಸಿದ್ದಾರೆ.
ಕನ್ನಡದ 65% ಶಬ್ಧ, ತಮಿಳಿನ 20% ಶಬ್ಧ ಸಂಸ್ಕೃತದಿಂದ ಬಂದಿವೆ ಎಂದು ಹೇಳುವ ಮೂಲಕ ಎಸ್.ಎಲ್ ಭೈರಪ್ಪ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.
ಎಸ್.ಎಲ್ ಭೈರಪ್ಪ ಹೇಳಿದ್ದೇನು?
'ಭಾರತದ ಬಹುತೇಕ ಭಾಷೆಗಳಿಗೆ ಸಂಸ್ಕೃತವೇ ಮಾತೃ ಭಾಷೆ. ಕನ್ನಡ ಮತ್ತು ತಮಿಳು ಭಾಷೆಗಳೂ ಈ ಮಾತಿಗೆ ಹೊರತಲ್ಲ. ಕನ್ನಡ ಶಬ್ದಕೋಶದ ಶೇ.65 ರಷ್ಟು ಶಬ್ದಗಳು ಮತ್ತು ತಮಿಳು ಶಬ್ದಕೋಶದ ಶೇ. 20 ರಷ್ಟು ಶಬ್ದಗಳು ಸಂಸ್ಕೃತದಿಂದಲೇ ಬಂದಿವೆ. ಸಾಹಿತ್ಯ ಪದಬಂಢಾರವಲ್ಲದೇ, ಆಧುನಿಕ ಜ್ಞಾನ ವಿಜ್ಞಾನದ ಶಾಖೆಗಳ ಪರಿಭಾಷೆಯೂ ಸಂಸ್ಕೃತದಿಂದಲೇ ಪ್ರಭಾವಿಯಾಗಿದೆ' ಎಂದು ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಹೇಳಿದ್ದಾರೆ.
ಇನ್ನು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಶೇಕಡವಾರು ಪ್ರಮಾಣ 70ರಿಂದ 75ರಷ್ಟು ಆಗಿದ್ದು, ತಮಿಳಿನಲ್ಲಿ ಈ ಪ್ರಮಾಣ ತುಂಬಾ ಕಡಿಮೆಯಾಗಿದ್ದು, ಅಲ್ಲಿ, ಶೇ.15ರಿಂದ 20ರಷ್ಟು ಮಾತ್ರ ಸಂಸ್ಕೃತದಿಂದ ಬಂದಿದೆ ಎಂದು ಭಾಷಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ನನ್ನ ಕಾದಂಬರಿಗಳನ್ನೆ ತೆಗೆದುಕೊಂಡರೆ, ಪರ್ವವೂ ಸೇರಿದಂತೆ ಒಟ್ಟು ಏಳು ಕಾದಂಬರಿಗಳು ಸಂಸ್ಕತಕ್ಕೆ ಅನುವಾದಗೊಂಡಿವೆ. ಭಾರತದ ಇತರ ಭಾಷೆಗಳ ವಿದ್ವಾಂಸರು ಸಂಸ್ಕೃತಕ್ಕೆ ಅನುವಾದಿತವಾಗಿರುವ ನನ್ನ ಈ ಕಾದಂಬರಿಗಳಿಂದ ನನ್ನ ಸಾಹಿತ್ಯದ ಅಂತೆಯೇ ಕನ್ನಡ ಸಾಹಿತ್ಯದ ಹಿರಿಮೆ, ಗರಿಮೆಗಳನ್ನು ಅರ್ಥಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಹೀಗಾಗಿ, ಒಂದು ಕಾಲದಲ್ಲಿ ಮಾತೃ ಸ್ವರೂಪಿಯಾಗಿದ್ದ ಸಂಸ್ಕೃತದಿಂದ ದೇಶದ ಭಾಷೆಗಳು ಸಮೃದ್ಧಗೊಂಡಿವೆ ಎಂದಿದ್ದಾರೆ.




