ಕುಂಬಳೆ: ಸಂಚಾರಿ ಕಾನೂನು ಉಲ್ಲಂಘಿಸುವವರನ್ನು ಪತ್ತೆಹಚ್ಚಲು ಹಾಗೂ ಇವರಿಂದ ದಂಡ ವಸೂಲಿಗಾಗಿ ಕೇರಳಾದ್ಯಂತ ಎಐ ಕ್ಯಾಮರಾ ಅಳವಡಿಸಿ ಮೋಟಾರು ವಾಹನ ಇಲಾಖೆ ಕಾರ್ಯಾಚರಣೆ ಆರಂಭಿಸಿ ವರ್ಷಗಳು ಸಂದಿದೆ. ಆದರೆ ಕುಂಬಳೆ ಪೇಟೆಯ 'ಅನಿಲ್ ಕುಂಬಳೆ ರಸ್ತೆ'ಗೆ ಹೊಂದಿಕೊಂಡಿರುವ ಕುಂಬಳೆ-ಬದಿಯಡ್ಕ-ಮುಳ್ಳೇರಿಯ ಕೆಎಸ್‍ಟಿಪಿ ರಸ್ತೆಯಲ್ಲಿ ಅಳವಡಿಸಿರುವ ಎಐ ಕ್ಯಾಮರಾದ ಬಗ್ಗೆ ಮಾಹಿತಿಯಿಲ್ಲದೆ ಬೇಕಾಬಿಟ್ಟಿ ತಿರುಗಾಡಿದ ದ್ವಿಚಕ್ರವಾಹನ ಸವಾರರು ಹಾಗೂ ಕಾರು ಚಾಲಕರು ಇದೀಗ ಭಾರಿ ಪ್ರಮಾಣದ ದಂಡ ಸರ್ಕಾರಕ್ಕೆ ಸಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕುಂಬಳೆ ಅಸುಪಾಸಿನ 400ಕ್ಕೂ ಹೆಚ್ಚುಮಂದಿಗೆ ದಂಡದ ಬಿಸಿ ಮುಟ್ಟಿದೆ. ಇವರಲ್ಲಿ 7500ರಿಂದ ಒಂದು ಲಕ್ಷ ರೂ. ವರೆಗೂ ದಂಡ ವಿಧಿಸಿ ನೋಟೀಸು ಜಾರಿಗೊಳಿಸಲಾಗಿದೆ.
ಇದು 2023ರಿಂದ 2025ರ ಕಾಲಾವಧಿಯಲ್ಲಿ ಇಲ್ಲಿ ಸಿಸಿ ಕ್ಯಾಮರ ಅಳವಡಿಸಿದ್ದರೂ, ಬಹುತೇಕಮಂದಿಗೆ ನೋಟೀಸು ಲಭಿಸುವಲ್ಲಿ ವಿಳಂಬವುಂಟಾದ ಹಿನ್ನೆಲೆಯಲ್ಲಿ ದಂಡದ ಮೊತ್ತ ಎಲ್ಲ ಒಂದೇ ಬಾರಿಗೆ ಕೈಸೇರಿದೆ. ಈ ಮಧ್ಯೆ ಕುಂಬಳೆಯ ಈ ಜಂಕ್ಷನ್ ಹಾಗೂ ಆಸುಪಾಸು ಸಿಸಿ ಕ್ಯಾಮರಾ ಅಳವಡಿಸಿದ್ದರೂ, ಇನ್ನೂ ಚಟುವಟಿಕೆ ಆರಂಭಿಸಿಲ್ಲ ಎಂಬ ಪ್ರಚಾರವೂ ವ್ಯಾಕಗೊಂಡಿತ್ತು. ಸಿಸಿ ಕ್ಯಾಮರಾ ಸಕ್ರಿಯವಾಗಿರುತ್ತಿದ್ದಲ್ಲಿ, ದಂಡದ ನೋಟೀಸು ಕೈಸೇರುತ್ತಿತ್ತು ಎಂಬುದಾಗಿ ತಮ್ಮಷ್ಟಕ್ಕೆ ಸಮಾಧಾನಪಟ್ಟುಕೊಂಡಿದ್ದವರಿಗೆ ಏಕಾಏಕಿ ದಂಡದ ನೋಡೀಸು ಕೈಸೇರಿದಾಗ ಆಘಾತವಾಗಿತ್ತು!
ದಂಡದ ನೋಟೀಸು ಕೈಸೇರುತ್ತಿದ್ದಂತೆ 'ಸಂತ್ರಸ್ತ'ರೆಲ್ಲ ಒಟ್ಟಾಗಿ ವಾಟ್ಸಪ್ ತಂಡವೊಂದನ್ನು ರಚಿಸಿಕೊಂಡಿದ್ದು, ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾರೆ. ಇವರಲ್ಲಿ ಪ್ರಮುಖ ರಾಜಕೀಯ ಮುಖಂಡರೂ ಒಳಗೊಂಡಿದ್ದಾರೆ. ಕಾನೂನು ಉಲ್ಲಂಘನೆ ನಡೆದಿದ್ದ ತಕ್ಷಣ ದಂಡದ ನೋಟೀಸು ಕೈಸೆರುತ್ತಿದ್ದಲ್ಲಿ ತಮಗೆ ಈ ಸ್ಥಿತಿ ಬರುತ್ತಿರಲಿಲ್ಲ ಎಂಬುದಾಗಿ ದಂಡದ ನೋಟೀಸು ಪಡೆದವರು ತಿಳಿಸಿದ್ದಾರೆ.
ದಂಡದ ಬಗ್ಗೆ ಸಂಶಯವಿದ್ದವರು ಅರ್ಜಿ ಸಲ್ಲಿಸಿದಲ್ಲಿ ದಂಡದ ಮೊತ್ತದ ಬಗ್ಗೆ ಖಚಿತ ಮಾಹಿತಿಯನ್ನು ದಾಖಲೆಯೊಂದಿಗೆ ಕಚೇರಿಯಿಂದ ನೀಡಲಾಗುವುದು ಎಂದು ಮೋಟಾರು ವಾಹನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವರ ಮಧ್ಯಪ್ರವೇಶ:
ಕುಂಬಳೆಯಲ್ಲಿ ಎಐ ಕ್ಯಾಮರಾ ಮೂಲಕ ಟ್ರಾಫಿಕ್ ಕಾನೂನು ಉಲ್ಲಂಘಿಸಿದವರಿಗೆ ಮೋಟಾರು ವಾಹನ ಇಲಾಖೆ ನೋಟೀಸು ನೀಡಿರುವ ಪ್ರಕರಣದ ಬಗ್ಗೆ ರಾಜ್ಯ ಸಾರಿಗೆ ಖಾತೆ ಸಚಿವ ಕೆ.ಬಿ ಗಣೇಶ್ ಕುಮಾರ್ ಮಧ್ಯ ಪ್ರವೇಶಿಸಿದ್ದು, ಘಟನೆ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಸಾರಿಗೆ ಆಯುಕ್ತರಿಗೆ ಸೂಚಿಸಿದ್ದಾರೆ. 2023ರಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದರೂ, ಇಲ್ಲಿ 2025 ಜೂ. 1ರ ನಂತರವಷ್ಟೆ ದಂಡದ ನೋಟೀಸು ರವಾನೆಯಾಗಿದ್ದು, ಎರಡು ವರ್ಷದ ವರೆಗಿನ ದಂಡವನ್ನು ಒಂದೇ ಬಾರಿಗೆ ನೀಡಿರುವುದರಿಂದ ವಾಹನ ಚಾಲಕರು ಕಂಗಾಲಾಗಿದ್ದರು. ನೋಟೀಸು ಕೈಸೇರುತ್ತಿದ್ದಂತೆ ಈ ಸಂತ್ರಸ್ತರೆಲ್ಲರೂ ಒಟ್ಟಾಗಿ ವಾಟ್ಸಪ್ ತಂಡ ರಚಿಸಿ ಇದರ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದರು.






