ಕಾಸರಗೋಡು: ನಗರದಿಂದ ಚಂದ್ರಗಿರಿ ಹಾದಿಯಾಗಿ ಕಾಞಂಗಾಡು ಸಂಚರಿಸುವ ಕೆಎಸ್‍ಟಿಪಿ ರಸ್ತೆಯ ಶೋಚನೀಯಾವಸ್ಥೆ ಬಗೆಹರಿಸುವಂತೆ ಆಗ್ರಹಿಸಿ ಬಿಜೆಪಿ ಉದುಮ ಮಂಡಲ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಆಯೋಜಿಸಲಾಯಿತು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಧರಣಿ ಉದ್ಘಾಟಿಸಿ ಮಾತನಾಡಿ, ಕಾಞಂಗಾಡು ಕೆಎಸ್‍ಟಿಪಿ ರಸ್ತೆಯ ಶೋಚನೀಯಾವಸ್ಥೆ ರಾಜ್ಯ ಸರ್ಕಾರದ ಅಧೋಗತಿಗೆ ಸಾಕ್ಷಿಯಾಗಿದೆ. ಸಾಧನೆಗಳ ಬಗ್ಗೆ ಬೊಗಳೆ ಮಾತುಗಳನ್ನಡುತ್ತಿರುವ ಲೋಕೋಪಯೋಗಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಪಿ.ಎ. ಮುಹಮ್ಮದ್ ರಿಯಾಸ್ ಅವರು ಕಾಞಂಗಾಡು ಕೆಎಸ್‍ಟಿಪಿ ರಸ್ತೆಯಲ್ಲಿ ರೋಡ್ ಶೋ ನಡೆಸಿ ಸೆಲ್ಫಿ ತೆಗೆದುಕೊಳ್ಳುವಂತೆ ಸವಾಲು ಹಾಕಿದರು.
ರಾಜ್ಯ ಲೋಕೋಪಯೋಗಿ ಸಚಿವರು ಕೇಂದ್ರ ಸರ್ಕಾರದ ನಿಧಿಯಿಂದ ನಿರ್ಮಿಸಲಾದ ಯೋಜನೆಗಳ ಬದಲು, ಕೇರಳ ರಾಜ್ಯ ಸಾರಿಗೆ ಯೋಜನೆ ಕಾಂಗಾರಿಗಳ ಸೆಲ್ಫಿ ತೆಗೆದುಕೊಳ್ಳಬೇಕು. ಕೆಎಸ್‍ಟಿಪಿ ರಸ್ತೆಯಲ್ಲಿ ಬಲಿಯಾಗುತ್ತಿರುವ ಪ್ರತಿಯೊಂದು ಜೀವಕ್ಕೂ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ಉತ್ತರ ಹೇಳಬೇಕಾಗಿದೆ. ಕೆಎಸ್‍ಟಿಪಿರಸ್ತೆಯನ್ನು ದುರಸ್ತಿನಡೆಸಿ, ರಸ್ತೆಯ ಶೋಚನೀಯಾವಸ್ಥೆ ಪರಿಹರಿಸುವಂತೆ ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್ ಆಶಯ ಭಾಷಣ ಮಾಡಿದರು. ಉದುಮ ಮಂಡಲ ಸಮಿತಿ ಉಪಾಧ್ಯಕ್ಷ ತಂಬಾನ್ ಆಚೇರಿ ಅಧ್ಯಕ್ಷತೆ ವಹಿಸಿದ್ದರು.
ಸದಾಶಿವನ್ ಮಣಿಯಂಗಾನಂ ಮತ್ತು ನಾರಾಯಣನ್ ವಡಕ್ಕಿಣಿಯೆ ಉಪಸ್ಥಿತರಿದ್ದರು. ಉದುಮ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೂಟಕಣಿ ಸ್ವಾಗತಿಸಿದರು. ಎ.ಎಂ. ಮುರಳೀಧರನ್ ವಂದಿಸಿದರು. ಸೌಮ್ಯ ಪದ್ಮನಾಭನ್, ರತೀಶ್ ವಿ.ಎ. ವಿನಿಲ್ ಕುಮಾರ್, ಮುರಳಿ ಅಚೇರಿ, ಓಂ ಪ್ರಸಾದ್ ಮೊದಲಾದವರು ಧರಣಿ ನೇತೃತ್ವ ವಹಿಸಿದ್ದರು.


