ಮಂಜೇಶ್ವರ: ಕನ್ನಡಿಯಲ್ಲಿ ಕನ್ನಡಿಗ ಮಾಲಿಕೆ ವಿಶಿಷ್ಟವಾದುದು. ಗಡಿಭಾಗದ ಅನೇಕ ಸಾಧಕರನ್ನು ಪರಿಚಯಿಸುವ ಪುಸ್ತಕಗಳ ಮಾಲಿಕೆಯನ್ನು ಹೊರತರುವ ಈ ಪರಿಕಲ್ಪನೆ ನಾವೀನ್ಯತೆಯಿಂದ ಕೂಡಿದ್ದು, ಡಾ.ರಮಾನಂದ ಬನಾರಿಯವರ ಕಾರ್ಯ ಮಾದರಿಯಾದುದು. ಗಡಿನಾಡಿನ ಸಾಧಕರ ಬದುಕನ್ನು, ವ್ಯಕ್ತಿತ್ವವನ್ನು, ಸಾಧನೆಗಳನ್ನು ಹೇಳುವ ಮೂಲಕ ಕಾಸರಗೋಡಿನ ಕನ್ನಡದ ಸ್ಥಿತಿಗತಿಗಳನ್ನು, ಗಡಿನಾಡ ಕನ್ನಡಿಗರ ಸಂಸ್ಕೃತಿಯನ್ನು, ಇಲ್ಲಿನ ಜನರ ಬದುಕನ್ನು ಸಮಗ್ರ ಕನ್ನಡಿಗರಿಗೆ ತಿಳಿಯಪಡಿಸುತ್ತದೆ. ಇದು ಕರ್ನಾಟಕದ ಇತರ ಕಡೆಗಳಿಗೆ ಸ್ಫೂರ್ತಿ ನೀಡಬಲ್ಲುದು. ಕರ್ನಾಟಕದ ಕನ್ನಡ ಪ್ರಜ್ಞೆಯನ್ನು ಇನ್ನಷ್ಟು ಪ್ರೇರೇಪಿಸಲು ಸಹಾಯಕವಾಗಬಲ್ಲುದು ಎಂದು ಖ್ಯಾತ ಸಾಹಿತಿ, ವಿಮರ್ಶಕ ಅರವಿಂದ ಚೊಕ್ಕಾಡಿ ಹೇಳಿದರು.
ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಅವರ ಸಾರಥ್ಯದಲ್ಲಿ ಹೊರ ಬರುತ್ತಿರುವ, ಗಡಿನಾಡು ಕಾಸರಗೋಡಿನ ವಿವಿಧ ಸಾಧಕರ ಪರಿಚಯ ಕೃತಿ ಸರಣಿ 'ಕನ್ನಡಿಯಲ್ಲಿ ಕನ್ನಡಿಗ' ಸಂಚಿಕೆ 3 ಮತ್ತು ಸಂಚಿಕೆ 4ನ್ನು ಶನಿವಾರ ಮೀಯಪದವು ವಿದ್ಯಾವರ್ಧಕ ವಿದ್ಯಾಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಕೃತಿಗಳ ಅವಲೋಕನಗೈದು ಅವರು ಮಾತನಾಡಿದರು.
ಅರುವತ್ತು ವರ್ಷ ದಾಟಿದ ಈ ಹಿರಿಯರ ಅನುಭವಗಳು, ಬದುಕು, ಬರಹಗಳು ಅನನ್ಯವಾದ ಸಾಂಸ್ಕøತಿಕ ಪ್ರವಾಹದ ಒಂದು ಧಾರೆಯಾಗಿ ವರ್ತಮಾನಕಾಲದ ಓದುಗರಿಗೆ ಮತ್ತು ಮುಂದಿನ ತಲೆಮಾರಿಗೆ ಬೆಳಕನ್ನು ನೀಡಬಲ್ಲುದು ಎಂದು ಅರವಿಂದ ಚೊಕ್ಕಾಡಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕೀರಿಕ್ಕಾಡು ಮಾಸ್ಟರ್ ವಿಷ್ಣು ಭಟ್ ಸ್ಮಾರಕ ಯಕ್ಷಗಾನ ಅಧ್ಯಯನ ಕೇಂದ್ರ ಬನಾರಿ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಮತ್ತು ವಿಕಾಸ ಮೀಯಪದವು ಇವರ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು.
ಕ.ಸಾ.ಪ. ದ.ಕ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಖ್ಯಾತ ದಂತ ವೈದ್ಯ, ಸಾಹಿತಿ ಡಾ. ಮುರಲೀ ಮೋಹನ ಚೂಂತಾರು ಮುಖ್ಯ ಅತಿಥಿಗಳಾಗಿದ್ದರು. ಸಾಹಿತಿ,ಪ್ರಾಧ್ಯಾಪಕ ಟಿ.ಎ.ಎನ್ ಖಂಡಿಗೆ, ಸಾಹಿತಿ ಡಾ. ಪ್ರಮೀಳ ಮಾಧವ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ. ಪಿ.ಎನ್. ಮೂಡಿತ್ತಾಯ ಮಾತನಾಡಿದರು.
ಸಂಚಿಕೆಯಲ್ಲಿನ ಸಾಧಕರಾದ ಡಾ. ಗೋವಿಂದ ಭಟ್ ಕೊಳ್ಚಪ್ಪೆ, ಶಾನ್ ಕಾಸರಗೋಡು, ಶೀಲಾ ಲಕ್ಷ್ಮಿ ಕಾಸರಗೋಡು, ಪಾರ್ವತಿ ದೇವಿ.ಟಿ, ರಾಜೇಂದ್ರ ಕಲ್ಲೂರಾಯ ಎಡನೀರು, ಜಯಲಕ್ಷ್ಮಿ ಕಾರಂತ, ವೆಂಕಟ್ ಭಟ್ ಎಡನೀರು, ಸತ್ಯವತಿ ಭಟ್ ಕೊಳಚೆಪ್ಪು, ಸಿ.ಎಚ್ ಗೋಪಾಲಕೃಷ್ಣ ಭಟ್ ಚುಕ್ಕಿನಡ್ಕ, ಬಾಲ ಮಧುರಕಾನನ, ಶಶಿಕಲಾ ಬಾಯಾರು, ಪ್ರೊ.ಶ್ರೀಶ ದೇವ ಪೂಜಿತ್ತಾಯ, ಡಾ.ಬೇ.ಸೀ ಗೋಪಾಲಕೃಷ್ಣ, ರಾಮಭಟ್ಟ ಸಜಂಗದ್ದೆ ಇವರಿಗೆ ಪುಸ್ತಕಗಳ ಉಡುಗೊರೆ ನೀಡಿ ಗೌರವಿಸಲಾಯಿತು. ಕವಯತ್ರಿ ಲಕ್ಷ್ಮಿ ವಿ ಭಟ್ ಸಾಧಕರ ಪರಿಚಯ ಮಾಡಿದರು.
ಅನುಜ್ಞಾಲಕ್ಷ್ಮಿ ಮೀಯಪದವು ಪ್ರಾರ್ಥನೆ ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ವಂದಿಸಿದರು.




.jpg)
.jpg)

