ಮುಳ್ಳೇರಿಯ: ಮುಳ್ಳೇರಿಯ ಸನಿಹದ ಕಾರ್ಲೆ ಎಂಬಲ್ಲಿ ತಂದೆ ಚಲಾಯಿಸುತ್ತಿದ್ದ ಕಾರು ಹಿಂದಕ್ಕೆ ಚಲಿಸಿ ಮಗುಚಿ ಬಿದ್ದ ಪರಿಣಾಮ ಇವರ ಎರಡು ವರ್ಷದ ಪುತ್ರಿ ದಾರುಣವಾಗಿ ಮೃತಪಟ್ಟಿದ್ದಾಳೆ. ಕಾರ್ಲೆ ನಿವಾಸಿ ಹರಿ-ಶ್ರೀವಿದ್ಯಾ ದಂಪತಿ ಪುತ್ರಿ ಹೃದ್ಯಾನಂದ ಸಾವನ್ನಪ್ಪಿದ ಬಾಲಕಿ. ಇವರ ಮನೆ ಸನಿಹದ ಏರು ರಸ್ತೆಯಲ್ಲಿ ಘಟನೆ ನಡೆದಿದೆ.
ಹರಿ, ಇವರ ಪತ್ನಿ ಮತ್ತು ಇಬ್ಬರು ಪುತ್ರಿಯರು ಗುರುವಾರ ಸಂಜೆ ಕಾರ್ಯಕ್ರಮಕ್ಕೆ ತೆರಳಿ ಮನೆಗೆ ವಾಪಸಾಗಿದ್ದರು, ಪತ್ನಿ ಮತ್ತು ಮಕ್ಕಳನ್ನು ಇಳಿಸಿ ಹರಿ ಕಾರಿನೊಂದಿಗೆ ಮತ್ತೆ ಹೊರಟಿದ್ದು, ಮನೆ ಸನಿಹದ ಏರು ರಸ್ತೆಯಲ್ಲಿ ಕಾರು ಸ್ಟಾರ್ಟ್ ಬಂದ್ ಆಗಿ ನಿಂತಿತ್ತು. ಇದನ್ನು ಕಂಡು ಪತ್ನಿ ಹಾಗೂ ಇಬ್ಬರು ಮಕ್ಕಳು ಕಾರಿನತ್ತ ತೆರಳಿದ್ದಾರೆ. ರಸ್ತೆ ಅಂಚಿಗೆ ಚಕ್ರ ಸಿಲುಕಿಕೊಂಡಿದ್ದು, ಈ ಮಧ್ಯೆ ಕಾರು ಹಿಂದಕ್ಕೆ ಚಲಿಸಲಾರಂಭಿಸಿದೆ. ಈ ಸಂದರ್ಭ ಇವರ ಹಿರಿಯ ಪುತ್ರಿಗೆ ಗಾಯ ಉಂಟಾಗಿದೆ. ಕ್ಷಣಾರ್ಧದಲ್ಲಿ ಕಾರು ಮಗುಚಿ ಬಿದ್ದಿದ್ದು, ಈ ಸಂದರ್ಭ ಹೃದ್ಯಾನಂದ ಕಾರಿನಡಿ ಸಿಲುಕಿಕೊಂಡಿದ್ದಳು. ತಕ್ಷಣ ಆಸುಪಾಸಿನವರು ಆಗಮಿಸಿ ಕಾರಿನಡಿಯಿಂದ ಬಾಲಕಿಯನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


